ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಹೈಕೋರ್ಟ್ : ದೆವ್ವ ಬೆನ್ನಟ್ಟಲು ಸಿದ್ಧವಾದ ಡಿಸಿಪಿ
ಬೆಂಗಳೂರು, ಜು. 22 : ಇಂದು ಖಗ್ರಾಸ ಸೂರ್ಯಗ್ರಹಣ ಮತ್ತು ದೀವಿಗೆ ಅಮಾವಾಸ್ಯೆ ಬೇರೆ. ದೆವ್ವ ಭೂತಗಳ ಕಾಟಕ್ಕೆ ಹೇಳಿ ಮಾಡಿಸಿದ ದಿನ ! ಬೆಂಗಳೂರಿನ ಹೈಕೋರ್ಟ್ ಆವರಣದ ಕಾರಿಡಾರ್ ನಲ್ಲಿ ಸುಳಿದಾಡುವ ಚೆಲುವೆ ಮೋಹಿನಿಯ ಕಥೆಯನ್ನು ನೀವು ಕೇಳಿದ್ದೀರಷ್ಟೆ. ಅಪಾರ ಸುದ್ದಿ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿರುವ ದೆವ್ವದ ಕಾಟ ಸುದ್ದಿ ನಿಜವೋ ಸುಳ್ಳೋ ಎನ್ನುವುದು ಸಾಬೀತಾಗಬೇಕಾಗಿದೆ. ದೆವ್ವವನ್ನು ಖುದ್ದು ಕಂಡು, ತನಿಖೆ ಮಾಡಲು ಡಿಸಿಪಿ ಕುಮಾರಸ್ವಾಮಿ ಏಕಾಂಗಿಯಾಗಿ ಇಂದು ಬುಧವಾರ ರಾತ್ರಿ (ಜು 22) ಉಚ್ಛನ್ಯಾಯಾಲಯದ ಕಟ್ಟಡಕ್ಕೆ ಹೋಗಲಿದ್ದಾರೆ. ಈ ಸುದ್ದಿ ಪೋಲಿಸ್ ವಲಯದಲ್ಲಿ, ಸಾರ್ವಜನಿಕ ವಲಯದಲ್ಲಿ ಮತ್ತು ಮಂತ್ರವಾದಿಗಳ ವಲಯದಲ್ಲಿ ಅಚ್ಚರಿ ಮತ್ತು ಸಂಚಲನ ಮೂಡಿಸಿದೆ.
ಮಾಧ್ಯಮಗಳಲ್ಲಿ 'ಕೆಂಪು ಕಟ್ಟಡದಲ್ಲಿ ಮೋಹಿನಿ ಅಟ್ಟ೦' ವರದಿ ಪ್ರಕಟವಾದ ನಂತರ ಇದನ್ನು ವೀಕ್ಷಿಸಲು ಡಿಸಿಪಿ ಭೇಟಿ ನೀಡಲಿದ್ದಾರೆ. ಈ ವರದಿ ಪ್ರಕಟವಾದ ನಂತರ ಕಬ್ಬನ್ ಪಾರ್ಕ್ ಆವರಣದಲ್ಲಿ ಕಳೆದ ಎಂಟು ವರ್ಷಗಳಿಂದ ವಾಸವಾಗಿದ್ದ ದೇವಮ್ಮ ಎನ್ನುವ ಮಹಿಳೆಯ ಸಂಸಾರವನ್ನು ಒಕ್ಕಲೆಬ್ಬಿಸಲಾಗಿದೆ. ಈಕೆ ತಾನು ದೆವ್ವವನ್ನು ನೋಡಿದೆ ಎಂದಿರುವುದು ಈಕೆಗೆ ಮುಳುವಾಗಿದೆ.
ಈ ಮಧ್ಯೆ ಸೋಮವಾರ ರಾತ್ರಿ ಕೋರ್ಟ್ ಸಂಖ್ಯೆ 36ರಲ್ಲಿ ಬಿಳಿ ಸೀರೆಯುಟ್ಟ ಮಹಿಳೆಯನ್ನು ನೋಡಿದ ಪೊಲೀಸರೊಬ್ಬರು ಬೆಚ್ಚಿಬಿದ್ದಿದ್ದಾರೆಂದೂ ವರದಿಯಾಗಿದೆ. ಅಮಾವಾಸ್ಯೆಯ ಈ ರಾತ್ರಿ ಏಕಾಂಗಿಯಾಗಿ ಹೋಗುತ್ತಿರುವ ಡಿಸಿಪಿ ಕಣ್ಣಿಗೆ 'ಮೋಹಿನಿ' ಬೀಳುವಳೇ ಎನ್ನುವುದು ಕುತೂಹಲದ ಸಂಗತಿ. ಆಲ್ ದಿ ಬೆಸ್ಟ್ ಕುಮಾರಸ್ವಾಮಿಗಳೆ. ನಾಳೆ ಶ್ರಾವಣ ಶುದ್ಧ ಪಾಡ್ಯ ಆರಂಭ. ನಿಮ್ಮ ಅನುಭವಗಳೊಂದಿಗೆ ಮತ್ತೆ ಭೇಟಿಯಾಗೋಣ. ಬೈ ಬೈ.
(ದಟ್ಸ್ ಕನ್ನಡ ವಾರ್ತೆ)
Comments
Story first published: Wednesday, July 22, 2009, 12:39 [IST]