ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಪ್ರಣಾಳಿಕೆಗೆ ರಾಜೀವ್ ಚಂದ್ರಶೇಖರ್ ಒತ್ತು

By Staff
|
Google Oneindia Kannada News

India need national manifesto : Rajeev Chandrasekhar
ಬೆಂಗಳೂರು, ಮಾ. 24 : ರಾಷ್ಟ್ರಕ್ಕೆ ಬೇಕಾಗಿರುವುದು ಬೇರೆ ಬೇರೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಬೇಕಾಗಿರುವುದು ರಾಷ್ಟ್ರೀಯ ಪ್ರಣಾಳಿಕೆ ಎಂದು ರಾಜ್ಯಸಭೆ ಸದಸ್ಯ ಮತ್ತು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿನ ಮಾಜಿ ಅಧ್ಯಕ್ಷ, ಕರ್ನಾಟಕದ ರಾಜಕಾರಣಿ ರಾಜೀವ್ ಚಂದ್ರಶೇಖರ್ ಅವರ ಸ್ಪಷ್ಟ ಅಭಿಪ್ರಾಯ.

ಭಾರತ ದೇಶ ಆರ್ಥ ವ್ಯವಸ್ಥೆ, ಆಡಳಿತ ಮತ್ತು ಭದ್ರತೆಗೆ ಸಂಬಂಧಿಸಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ವೈವಿಧ್ಯಮಯ ತತ್ತ್ವ ಸಿದ್ಧಾಂತವುಳ್ಳ ಸಮ್ಮಿಶ್ರ ರಾಜಕೀಯ ಪಕ್ಷಗಳಿಂದಾಗಿ ಅಸ್ಥಿರತೆಯನ್ನು ಎದುರಿಸುತ್ತಿದೆ. ಇದರಿಂದ ಹೊರಬರಲು ರಾಷ್ಟ್ರದ ಹಿತದೃಷ್ಟಿಯಿಂದ ಆರ್ಥಿಕತೆ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವಿರುವ ರಾಷ್ಟ್ರೀಯ ಪ್ರಣಾಳಿಕೆಯನ್ನು ಸಿದ್ಧಪಡಿಸಬೇಕು ಮತ್ತು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

'ಎಲ್ಲಾ ರಾಜಕೀಯ ಪಕ್ಷಗಳಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಬೇಕೆ?' ಎಂಬ ವಿಷಯ ಕುರಿತಂತೆ ಸಿಎನ್ಎನ್-ಐಬಿಎನ್ ವೆಬ್ ಸೈಟಿನಲ್ಲಿ ನೆಟ್ಟಿಗರೊಡನೆ ನಡೆದ ನೇರ ಮಾತುಕತೆಯಲ್ಲಿ ದೇಶದ ಆರ್ಥಿಕ ಸ್ಥಿತಿಗತಿ, ಚುನಾವಣೆ, ಭ್ರಷ್ಟಾಚಾರ, ಅಭಿವೃದ್ಧಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.

ದೇಶದ ಚುಕ್ಕಾಣಿಯನ್ನು ರಾಜಕಾರಣಿಗಳ ಬದಲಾಗಿ ಉದ್ಯಮಿಗಳಿಗೆ ನೀಡಬೇಕಾ ಎಂಬ ಪ್ರಶ್ನೆಗೆ ಚಂದ್ರಶೇಖರ್, ರಾಜಕೀಯ ಮಾತ್ರವಲ್ಲ ಉದ್ಯಮದಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಉದ್ಯಮಿಗಳಿದ್ದಾರೆ. ಹಾಗಾಗಿ ಉದ್ಯಮಿಗಳು, ವೃತ್ತಿಪರರು, ಯುವಕರು ಮತ್ತು ಹಿರಿಯರ ಸಂಗಮದ ರಾಜಕೀಯ ತಂಡ ಕಟ್ಟಬೇಕಾಗಿದೆ. ಒಣ ಭರವಸೆಗಳಿಗಿಂತ ಸಮಸ್ಯೆಯ ನಿಜವಾದ ಕಾರಣ ಹುಡುಕಿ ನಿಜವಾದ ಪರಿಹಾರ ಕಂಡುಹಿಡಿಯುವ ಅಗತ್ಯವಿದೆ ಎಂದು ಮಾರ್ಮಿಕವಾಗಿ ನುಡಿದರು.

ಚುನಾವಣೆಯಿಂದ ಚುನಾವಣೆಗೆ ಖರ್ಚು ವೆಚ್ಚಗಳು ದ್ವಿಗುಣವಾಗುತ್ತಿವೆ. ಭಾರತದಂಥ ದೇಶಕ್ಕೆ ಇಷ್ಟೊಂದು ಚುನಾವಣೆಗಳ ಅಗತ್ಯವೂ ಇಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ನಡೆಸುವಂಥ ಸಾಂವಿಧಾನಿಕ ತಿದ್ದುಪಡಿ ತರಬೇಕು. ಹಣವನ್ನು ಸದ್ವಿನಿಯೋಗ ಮಾಡಲು ಆಯ್ಕೆಯಾದ ಪಕ್ಷ ಕನಿಷ್ಠ ಐದು ವರ್ಷಗಳವರೆಗೆ ಅಧಿಕಾರ ಚಲಾಯಿಸುವಂತಾಗಬೇಕು ಎಂದು ಸಾವಿರಾರು ಕೋಟಿ ರು. ಹಣವನ್ನು ಚುನಾವಣೆಗಳು ನುಂಗಿಹಾಕುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಭಾರತೀಯ ಪ್ರಜಾತಂತ್ರಕ್ಕೆ 2009ರಲ್ಲಿ ನಡೆಯುತ್ತಿರುವ ಮಹಾಚುನಾವಣೆ ರಾಜಕೀಯದ ದಿಕ್ಕನ್ನು ಬದಲಿಸಲಿದೆ ಎಂದ ಅವರು, ಬದಲಾವಣೆ ಸಕಾರಾತ್ಮಕವಾಗಿಯೂ ಆಗಿರಬಹುದು, ಅಸ್ಥಿರತೆಯನ್ನೂ ತರಬಹುದು ಎಂದು ಸಾಧ್ಯತೆಗಳನ್ನು ವಿಶ್ಲೇಷಿಸಿದರು.

ದೇಶದ ಜನತೆ ಎದುರಿಸುತ್ತಿರುವ ಬಡತನ, ಶೈಕ್ಷಣಿಕ ನೀತಿ, ಅಭಿವೃದ್ಧಿಯ ಹಿನ್ನೆಡೆ, ನಿಧಾನಗತಿಯಲ್ಲಿ ಸಾಗುತ್ತಿರುವ ವ್ಯಾಜ್ಯಗಳ ವಿಲೇವಾರಿ, ಬಂಡವಾಳದ ಹರಿವು, ರಾಷ್ಟ್ರೀಯ ಭದ್ರತೆ, ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ರಾಜೀವ್ ಚಂದ್ರಶೇಖರ್ ಉತ್ತರಿಸಿದರು.

ರಾಜೀವ್ ಚಂದ್ರಶೇಖರ್ ಬ್ಲಾಗ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X