ಬೂಟು ಎಸೆದವನಿಗೆ 3 ವರ್ಷ ಜೈಲು ಶಿಕ್ಷೆ
ಬಾಗ್ದಾದ್, ಮಾ. 12 : ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರೆಡೆಗೆ ಬೂಟು ಎಸೆದು ಅವಮಾನ ಮಾಡಿದ್ದ ಇರಾಕ್ ಪತ್ರಕರ್ತ ಮುಂತೆಜಾರ್ ಅಲ್ ಜೈದಿಗೆ ಸ್ಥಳೀಯ ನ್ಯಾಯಾಲಯವೊಂದು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಡಿಸೆಂಬರ್ 14 ರಂದು ಬುಷ್ ಇರಾಕ್ ಪ್ರವಾಸ ಕೈಗೊಂಡಿದ್ದರು. ಬುಷ್ ಮಾತುಗಳಿಂದ ಆಕ್ರೋಶಕ್ಕೆ ಒಳಗಾದ ಜೈದಿ ತನ್ನ ಬೂಟನ್ನು ಅವರೆಡೆಗೆ ಎಸೆದಿದ್ದ. ಅರಬ್ ರಾಷ್ಟ್ರಗಳಲ್ಲಿ ಜೈದಿ ಕೃತ್ಯಕ್ಕೆ ವ್ಯಾಪಕ ಪ್ರಶಂಸೆಯ ಸುರಿಮಳೆಯೇ ವ್ಯಕ್ತವಾಗಿತ್ತು.
ನಂತರ ಪ್ರತಿಕ್ರಿಯಿಸಿದ್ದ ಜೈದಿ, ನಾನೊಬ್ಬ ಇರಾಕಿ ವ್ಯಕ್ತಿಯಾಗಿ ಇದನ್ನು ಮಾಡಿರುವುದು ಸರಿ ಎನಿಸುತ್ತದೆ ಎಂದು ಹೇಳಿಕೆ ನೀಡಿದ್ದ. ಜೈದಿಗೆ ಅನೇಕ ಮಾನ ಸನ್ಮಾನಗಳು ಜೊತೆಗೆ ಕೆಲವರು ತಮ್ಮ ಮಗಳನ್ನು ಆತನಿಗೆ ಧಾರೆ ಎರೆಯಲು ಸಹ ಮುಂದಾಗಿದ್ದರು. ಡಿಸೆಂಬರ್ 14 ರಂದು ಬಾಗ್ದಾದ್ ನಲ್ಲಿ ಇರಾಕ್ ಪ್ರಧಾನಿ ನೂರಿ ಅಲ್ ಮಲಿಕ್ ಹಾಗೂ ಅಮೆರಿಕದ ಅಧ್ಯಕ್ಷರಾಗಿದ್ದ ಬುಷ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications