ಬ್ಲಾಂಡಿ ಬಾರ್ಬಿಗೆ 50ನೇ ಹುಟ್ಟುಹಬ್ಬದ ಸಡಗರ

1959ರ ಮಾರ್ಚ್ 9ರಂದು ಬಾರ್ಬಿಗೆ ಮೆಟಲ್ ಆಟಿಕೆ ಕಂಪನಿಯ ಸಹಸಂಸ್ಥಾಪಕರಾದ ಎಲಿಯಟ್ ಜನ್ಮ ನೀಡಿದರು. ಬಾರ್ಬಿಯ ಹುಟ್ಟು ಕೂಡ ಸೋಜಿಗವಾಗಿಯೇ ಇದೆ. ತಮ್ಮ ಮಗಳು ಬಾರ್ಬರಾ (ಬಾರ್ಬಿ) ಪೇಪರ್ ಬೊಂಬೆಗಳ ಜೊತೆ ಆಟವಾಡುತ್ತ ಅವುಗಳಿಗೆ ವಿವಿಧ ರೂಪ ಕೊಡುತ್ತಿದ್ದುದನ್ನು ಗಮನಿಸಿದ ರುತ್ ಹ್ಯಾಂಡ್ಲರ್ ಇದನ್ನು ತಮ್ಮ ಗಂಡ ಎಲಿಯಟ್ ಗೆ ತಿಳಿಸಿದರು. ತಾವೇ ಏಕೆ ಅಂತಹ ಬೊಂಬೆಗಳನ್ನು ತಯಾರಿಸಬಾರದೆಂದು ಎಲಿಯಟ್ ಚಿಂತಿಸಿದರು. ಅವರ ಚಿಂತನೆಯ ಫಲವೇ ಬಾರ್ಬಿ. ಮಾರ್ಚ್ 9 1959ರಂದು ಅಮೆರಿಕ ಅಂತಾರಾಷ್ಟ್ರೀಯ ಆಟಿಕೆ ಮೇಳದಲ್ಲಿ ಪ್ರಥಮಬಾರಿಗೆ ಬಾರ್ಬಿ ಪ್ರದರ್ಶಿತವಾಯಿತು. ಅಂದೇ ಅದರ ಹುಟ್ಟುಹಬ್ಬವನ್ನೂ ಆಚರಿಸಿಕೊಂಡುಬರಲಾಗುತ್ತಿದೆ.
ಅಲ್ಲಿಯವರೆಗೆ ಕೇವಲ ಪುಟ್ಟಮಕ್ಕಳ ರೂಪದಲ್ಲಿದ್ದ ಬಾರ್ಬಿ ವಯಸ್ಸು ಮೀರಿ ವಿವಿಧ ರೂಪ ಪಡೆಯಿತು. ಮಕ್ಕಳ ಗೊಂಬೆಗಿಂತ ವಯಸ್ಕರ ಗೊಂಬೆಯಂತಾಗಿದ್ದರಿಂದ ಅದರ ವೇಷಭೂಷಣಗಳಿಂದಾಗಿ ಅನೇಕ ಅಡೆತಡೆಗಳನ್ನು, ವಿವಾದಗಳನ್ನೂ ಎದುರಿಸಬೇಕಾಯಿತು. ಈಜುಡುಗೆಯ ಬಾರ್ಬಿ ಭಾರೀ ಮುಜುಗರ ಉಂಟುಮಾಡಿತ್ತು. ಮೊದಲಿಗೆ ವಯಸ್ಕರಿಗೆ ಮಾತ್ರ ಮೀಸಲಾಗಿದ್ದ ಬಾರ್ಬಿ ಮಕ್ಕಳಲ್ಲಿಯೂ ಭಾರೀ ಜನಪ್ರಿಯತೆ ಗಳಿಸುತ್ತ ಸಾಗಿತು. ಟೀನೇಜ್ ಫ್ಯಾಷನ್ ಐಕಾನ್ ಆಗಿರುವ ಬಾರ್ಬಿ ಇಂದು ಮಕ್ಕಳ ಅಚ್ಚುಮೆಚ್ಚಿನ ಆಟಿಕೆಯಾಗಿ ಬೆಳೆದಿದೆ. 150 ರಾಷ್ಟ್ರಗಳಲ್ಲಿ ಬಾರ್ಬಿ ಮಾರಾಟವಾಗುತ್ತಿದೆ.
ಇಸ್ಲಾಂ ಧರ್ಮಕ್ಕೆ ವಿರೋಧವಾಗಿದೆಯೆಂದು ಬಾರ್ಬಿಯನ್ನು ಸೌದಿ ಅರೇಬಿಯಾ ನಿಷೇಧಿಸಿತ್ತು. ಬಾರ್ಬಿ ಕೆಲ ರಾಸಾಯನಿಕ ಪದಾರ್ಥ ಬಿಡುಗಡೆ ಮಾಡುತ್ತಿದ್ದು, ಅದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು 2000ರಲ್ಲಿ ಸುದ್ದಿ ಹಬ್ಬಿತ್ತು. ಆದರೆ, ಆ ಆರೋಪವನ್ನು ತಜ್ಞರ ತಂಡ ತಳ್ಳಿಹಾಕಿತ್ತು.
ಇದನ್ನೂ ಓದಿರಿ
ನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ...












Click it and Unblock the Notifications