ಲೋಡ್ ಶೆಡ್ಡಿಂಗ್ ರೋಗಕ್ಕೆ ಪುಣೆ ಮಾದರಿ ಮದ್ದು
ಬೆಂಗಳೂರು, ಡಿ.25: ಬೆಂಗಳೂರು ಗ್ರಾಹಕರಿಗೆ ಹೊಸ ವರ್ಷ ಕಹಿಯಾಗುವ ಸಾಧ್ಯತೆ ಇದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಪ್ರತಿ ಯೂನಿಟ್ ವಿದ್ಯ್ಯುತ್ ದರವನ್ನು 29 ಪೈಸೆ ಹೆಚ್ಚಿಸಲು ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಪ್ರತಿ ನಿತ್ಯ 1,700 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಪ್ರಸ್ತುತ ಬೆಸ್ಕಾಂಗೆ 1,400 ಮೆಗಾವ್ಯಾಟ್ ವಿದ್ಯುತನ್ನು ಮಾತ್ರ ಸರಬರಾಜು ಮಾಡುವ ಸಾಮರ್ಥ್ಯ ಇದೆ. 300 ಮೆಗಾವ್ಯಾಟ್ ಕೊರತೆಯನ್ನು ಸರಿತೂಗಿಸಿಕೊಳ್ಳಲು 1 ಗಂಟೆ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ. ಲೋಡ್ ಶೆಡ್ಡಿಂಗನ್ನು ತಪ್ಪಿಸಲು 'ಪುಣೆ ಮಾದರಿ'ಯನ್ನು ಅನುಸರಿಸಲು ನಿರ್ಧರಿಸಲಾಗಿದೆ.
ಪುಣೆ ಮಾದರಿ ಅಂದರೆ: ಲೋಡ್ ಶೆಡ್ಡಿಂಗನ್ನು ತಪ್ಪಿಸಿಕೊಳ್ಳಲು ಪುಣೆಯ ಕೈಗಾರಿಕೆಗಳು ಜನರೇಟರ್ ಗಳನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದವು. ಆಗ ಗ್ರಾಹಕರ ಮೇಲೆ ಯೂನಿಟ್ ಗೆ 42 ಪೈಸೆ ಹೆಚ್ಚು ದರ ವಿಧಿಸಲಾಯಿತು. ಈಗ ಅದು 47 ಪೈಸೆಯಾಗಿದೆ. ಹೀಗಿದ್ದುಕೊಂಡೂ ಲೋಡ್ ಶೆಡ್ಡಿಂಗ್ ಮುಂದುವರಿದಿದೆ. ಗ್ರಾಹಕರು ಈ ವ್ಯವಸ್ಥೆಯನ್ನು ಒಪ್ಪಿಕೊಂಡಿಲ್ಲ. ಆದರೂ ಈ ಪದ್ಧತಿ ಮುಂದುವರಿದಿದೆ.
ಡಿ.31ರೊಳಗೆ ಗ್ರಾಹಕರು ಲಿಖಿತ ಆಕ್ಷೇಪಗಳನ್ನು ಸಲ್ಲಿಸಬಹುದು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಈ ಕುರಿತು ಜ.12ರಂದು ಸಾರ್ವಜನಿಕ ವಿಚಾರಣೆ ನಡೆಸಲಿದೆ. ಗ್ರಾಹಕರು ಒಪ್ಪಿಗೆ ನೀಡಿದಲ್ಲಿ ಹೆಚ್ಚುವರಿ ದರ ಜಾರಿಗೆ ಬರಲಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications