ರಾಂಚಿಯಲ್ಲಿ ಧೋನಿಗೊಂದು ದೇವಾಲಯ
ರಾ೦ಚಿ, ಡಿ. 22 : ತಮಿಳುನಾಡಿನಲ್ಲಿ ತಮ್ಮ ಆರಾಧ್ಯ ನಟ-ನಟಿಯರಿಗೆ ನೆಚ್ಚಿನ ಅಭಿಮಾನಿಗಳು ದೇವಾಲಯ ನಿರ್ಮಿಸುವುದು ಹೊಸ ಸುದ್ದಿಯೇನಲ್ಲ. ಕನ್ನಡಿಗ, ತಮಿಳು ಚಿತ್ರರಂಗದ ಅನಭಿಷಕ್ತ ದೊರೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಂದ ಹಿಡಿದು ನಟಿ ಖುಷ್ಬೂ ಸೇರಿದಂತೆ ಅನೇಕ ನಟ-ನಟಿಯರ ದೇವಸ್ಥಾನ ನಿರ್ಮಿಸಿ ದೇವರ ರೀತಿಯಲ್ಲಿ ಪೂಜಿಸುವುದು ಸರ್ವೆ ಸಾಮಾನ್ಯ. ಆದರೆ, ಇದೀಗ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳು ರಾಂಚಿಯಲ್ಲಿ ದೇವಾಲಯ ನಿರ್ಮಿಸಲು ಮುಂದಾಗಿರುವುದು ವಿಶೇಷವಾಗಿದೆ. ಇದು ಕ್ರಿಕೆಟ್ ಆಟಗಾರರಿಗೂ ಹೊಸತು ಎನ್ನಲಾಗಿದೆ.
ಬರುವ ಜನವರಿ 14 ರ೦ದು ಧೋನಿ ದೇವಾಲಯ ಕಾಮಗಾರಿ ಆರ೦ಭವಾಗಲಿದೆ. ಇಲ್ಲಿ ಧೋನಿಯ ಭವ್ಯ ಮೂರ್ತಿ ಇರುತ್ತದೆ. ಧೋನಿ ಅಭಿಮಾನಿಗಳಿ೦ದ ಹಣ ಸ೦ಗ್ರಹಿಸುವ ಕೆಲಸ ಈಗ ಭರದಿಂದ ಸಾಗಿದೆ. ನಮ್ಮ ಪಾಲಿಗೆ ಧೋನಿ ದೇವರು ಇದ್ದ ಹಾಗೆ. ಅವರ ದೇವಾಲಯವನ್ನು ರಾ೦ಚಿಯಲ್ಲಿ ಸ್ಥಾಪಿಸಲು ನಿರ್ಧರಿಸಿದ್ದೇವೆ. ದೇವಾಲಯಗಳಲ್ಲಿ ದೇವರನ್ನು ಪೂಜೆ ಮಾಡುವ೦ತೆ ನಾವು ನಿತ್ಯವೂ ಧೋನಿ ವಿಗ್ರಹವನ್ನು ಆರಾಧಿಸುತ್ತೇವೆ ಎ೦ದು ಧೋನಿ ಅಭಿಮಾನಿ ಕ್ಲಬ್ ತಿಳಿಸಿದೆ.
ರಾ೦ಚಿಯ ಹವಾಯಿ ನಗರದಲ್ಲಿ ಸ್ಥಾಪನೆಯಾಗಲಿರುವ ಈ ದೇವಾಲಯದ ಗೋಡೆಗಳಲ್ಲಿ ಧೋನಿಯ ಭಾವಚಿತ್ರವಿರುತ್ತದೆ. ಭಾರತೀಯ ಕ್ರಿಕೆಟ್ ತಂಡದ ನಾಯಕವಾಗಿರುವ ಧೋನಿ, ಕ್ರಿಕೆಟ್ ಜೀವನದ ಉತ್ತುಂಗದಲ್ಲಿದ್ದಾರೆ. ಅಭಿಮಾನಿಗಳ ಬಳಗ ತಮ್ಮ ದೇವಾಲಯ ನಿರ್ಮಿಸಲು ಮುಂದಾಗಿರುವುದು ಧೋನಿಗೆ ಸಹಜವಾಗಿಯೇ ಅಶ್ಚರ್ಯ ತರಿಸಬಹುದು.
(ದಟ್ಸ್ ಕನ್ನಡ ವಾರ್ತೆ)
ಖೇಲ್ ರತ್ನ ಸ್ವೀಕರಿಸಿಲು ಧೋನಿಗೆ ಉದಾಸೀನತೆ