ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ವೀರೂಚಿತ ಗೆಲುವು

ಇಂಗ್ಲೆಂಡ್ ತಂಡ ನೀಡಿದ್ದ 387 ರನ್ ಗಳ ಗುರಿಯನ್ನು ಕೇವಲ 4 ವಿಕೆಟ್ ಕಳೆದುಕೊಂಡು ಭಾರತ ಎರಡು ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆಯನ್ನು ಪಡೆದುಕೊಂಡಿದೆ. ಇದರಿಂದಾಗಿ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಆಡಿರುವ ಎಲ್ಲ ಟೆಸ್ಟ್ ಪಂದ್ಯಗಳನ್ನು ಭಾರತ ಗೆದ್ದಂತಾಗಿದೆ. ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಇದು ನಾಲ್ಕನೇ ಗೆಲುವು.
ಈ ಗೆಲುವಿನೊಂದಿಗೆ ಇನ್ನೂ ಎರಡು ಸಾಧನೆಗಳನ್ನು ಭಾರತ ತನ್ನ ಮುಡಿಗೇರಿಸಿಕೊಂಡಿದೆ. ಗುರಿಯನ್ನು ಬೆನ್ನತ್ತಿ ಗೆಲುವು ಸಾಧಿಸಿರುವ ನಾಲ್ಕನೇ ಅತೀ ದೊಡ್ಡ ಮೊತ್ತ ಇದಾಗಿದೆ. ಮತ್ತು ಚೆನ್ನೈನಲ್ಲಿ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗಳಿಸಿರುವ ಅತಿ ದೊಡ್ಡ ಮೊತ್ತವಾಗಿದೆ.
ಸಚಿನ್, ಯುವಿ ಭರ್ಜರಿ ಬ್ಯಾಟಿಂಗ್ : ವೀರೇಂದ್ರ ಸೆಹ್ವಾಗ್ ಬಿರುಗಾಳಿ ಬ್ಯಾಟಿಂಗ್ ನಂತರ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ರನ್ನು ಬೇಗನೆ ಕಳೆದುಕೊಂಡು ಭಾರತ ಆತಂಕ ಎದುರಿಸುತ್ತಿತ್ತು. ಆಗ ಒಂದಾದ ಸಚಿನ್ ತೆಂಡೂಲ್ಕರ್ (ಅಜೇಯ 103) ಮತ್ತು ಯುವರಾಜ್ ಸಿಂಗ್ (ಅಜೇಯ 85) ರನ್ ಗಳಿಸಿ ಭಾರತವನ್ನು ನಿರಾಯಾಸವಾಗಿ ದಡ ಮುಟ್ಟಿಸಿದರು. ಇವರಿಬ್ಬರೂ ಐದನೇ ವಿಕೆಟ್ ಜೊತೆಯಾಟದಲ್ಲಿ 163 ರನ್ ಗಳಿಸಿದರು.
ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 62 ಎಸೆತಗಳಲ್ಲಿ 83 ರನ್ ಗಳಿಸಿ ಇಂಗ್ಲೆಂಡ್ ದಾಳಿಯನ್ನು ಧೂಳಿಪಟ ಮಾಡಿದ ವೀರೇಂದ್ರ ಸೆಹ್ವಾಗ್ ಪಂದ್ಯದ ಪುರುಷೋತ್ತಮರಾದರು. ಸಚಿನ್ ತೆಂಡೂಲ್ಕರ್ 41ನೇ ಟೆಸ್ಟ್ ಶತಕ ದಾಖಲಿಸಿದರು. ಟೆಸ್ಟ್ ತಂಡದಲ್ಲಿ ಸ್ಥಾನ ಗಳಿಸಲು ಪರದಾಡುತ್ತಿದ್ದ ಯುವರಾಜ್ ಸೌರವ್ ನಿವೃತ್ತಿಯ ನಂತರ ದಕ್ಕಿದ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ಇಂಗ್ಲೆಂಡ್ ತಂಡದ ಪರ ಸ್ಟ್ರಾಸ್ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ದಾಖಲಿಸಿದ್ದಾರೆ. ಮಾಂಟಿ ಪನೇಸರ್ ಮತ್ತು ಸ್ವಾನ್ ಅವರ ಸ್ಪಿನ್ ದಾಳಿ ಭಾರತೀಯ ದಾಂಡಿಗರ ಮುಂದೆ ಮೊನಚು ಕಳೆದುಕೊಂಡಂತಿತ್ತು.
ಎರಡನೇ ಮತ್ತು ಕೊನೆಯ ಟೆಸ್ಟ್ ಮೊಹಾಲಿಯಲ್ಲಿ ಡಿಸೆಂಬರ್ 19ರಿಂದ ನಡೆಯಲಿದೆ.
(ದಟ್ಸ್ ಕ್ರಿಕೆಟ್ ವಾರ್ತೆ)











Click it and Unblock the Notifications