ಉಗ್ರರಿಗೆ ಪಾಕ್ ಸೇನಾಧಿಕಾರಿಯಿಂದ ತರಬೇತಿ
ನ್ಯೂಯಾರ್ಕ್, ಡಿ. 4 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಕೈವಾಡವಿರುವುದು ತನಿಖೆಯಿಂದ ಸ್ಪಷ್ಟವಾಗುತ್ತಿರುವ ಬೆನ್ನಲ್ಲೇ ಮುಂಬೈ ನಗರದ ದಾಳಿ ಮಾಡಲು ಪಾಕಿಸ್ತಾನ ಮಾಜಿ ಸೇನಾಧಿಕಾರಿಗಳು ಉಗ್ರರಿಗೆ ತರಬೇತಿ ನೀಡಿ ದಾಳಿಗೆ ಸಹಕರಿಸಿದ್ದಾರೆ ಎನ್ನುವ ಮಹತ್ವದ ಅಂಶ ಅಮೆರಿಕ ಗುಪ್ತದಳ ಅಧಿಕಾರಿಗಳ ಬಳಿ ಇದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಅಮೆರಿಕದ ರಕ್ಷಣಾ ಹಾಗೂ ಗುಪ್ತಚರ ಇಲಾಖೆ ನಡೆಸಿದ ತನಿಖೆಯಿಂದ ಈ ವಿಷಯ ಬಯಲಿಗೆ ಬಂದಿದ್ದು, ಪಾಕಿಸ್ತಾನದಲ್ಲಿ ಗುಪ್ತಚರ ಇಲಾಖೆ ಭಾರಿ ಚುರುಕಿನಿಂದ ಕಾರ್ಯನಿರ್ವಹಿಸುತ್ತದೆ. ಮುಂಬೈ ಮೇಲೆ ದಾಳಿ ಮಾಡಲು ಮಾಜಿ ಸೇನಾಧಿಕಾರಿಗಳು ಉಗ್ರರಿಗೆ ತರಬೇತಿ ನೀಡಿ ಮುಂಬೈನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಎಲ್ಲ ಸಹಾಯ, ಸಹಕಾರ ನೀಡಿದ್ದಾರೆ ಎಂದು ಪೆಂಟಗಾನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಆದರೆ ಪಾಕಿಸ್ತಾನದ ಸರ್ಕಾರಕ್ಕೂ ಮತ್ತು ಉಗ್ರರಿಗೂ ನಂಟಿರುವ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಮುಂಬರುವ ದಿನಗಳಲ್ಲಿ ನಡೆಸುವ ತನಿಖೆಯಿಂದ ಮಾತ್ರ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಅಜ್ಮಲ್ ಅಮೀರ್ ಕಸಬ್ ನಿಂದ ಅನೇಕ ಅಂಶಗಳು ಈಗಾಗಲೇ ಹೊರಬಂದಿದ್ದು, ನಾನು ಪಾಕಿಸ್ತಾನದ ಪ್ರಜೆ, ಲಷ್ಕರ್-ಇ-ತೊಯ್ಬಾ ಸಂಘಟನೆ ಸದಸ್ಯ, ಅಲ್ಲಿನ ಸರ್ಕಾರ ಮುಂಬೈ ದಾಳಿ ಎಲ್ಲ ರೀತಿಯಿಂದಲೂ ಸಹಕಾರ ನೀಡಿದೆ ಎಂದು ಹೇಳಿದ್ದಾನೆ. ಉಗ್ರರ ಹೇಳಿಕೆಯಿಂದ ಪಾಕ್ ಸರ್ಕಾರದಲ್ಲಿ ತಲ್ಲಣ ಉಂಟಾಗಿದ್ದು, ಭಾರತ ಯುದ್ಧ ಸಾರುವ ಬೀತಿ ಪಾಕಿಸ್ತಾನದಲ್ಲಿ ಆವರಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications