ಅಸ್ಸಾಂನ ರೈಲಿನಲ್ಲಿ ಭೀಕರ ಸ್ಫೋಟ; 3 ಸಾವು
ಗೌಹಾಟಿ, ಡಿ. 2 : ಮುಂಬೈ ಭಯೋತ್ಪಾದನೆ ದುಷ್ಕೄತ್ಯದ ಬೆನ್ನಲ್ಲೇ ಅಸ್ಸಾಂನ ಪ್ಯಾಸೆಂಜರ್ ರೈಲಿನಲ್ಲಿ ಬೆಳಿಗ್ಗೆ 7.50 ರ ಸುಮಾರಿಗೆ ಭೀಕರ ಸ್ಫೋಟ ಸಂಭವಿಸಿದೆ. ಪ್ರಾಥಮಿಕ ತನಿಖೆಯ ನಂತರ ಇದು ಬೋಡೋ ಉಲ್ಫಾ ಉಗ್ರರ ಕೈವಾಡ ಎಂದು ಶಂಕೆ ವ್ಯಕ್ತವಾಗಿದೆ.ಸ್ಥಳೀಯ ಉಗ್ರರೊಡನೆ ಅಂತಾರಾಷ್ಟ್ರೀಯ ಉಗ್ರರು ಕೈ ಜೋಡಿಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇಲ್ಲಿನ ಕರ್ಬಿ-ಅಂಗಲಾಂಗ್ ಜಿಲ್ಲೆಯ ದೀಫೂ ರೈಲು ನಿಲ್ದಾಣದಲ್ಲಿ ತೀನ್ ಸುಕಿಯಾ- ಲಿಮಾಡಿಂಗ್ ಮಾರ್ಗದ ಪ್ಯಾಸೆಂಜರ್ ರೈಲಿನ ಬೋಗಿ ನಂ.3 ರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಿಂದ ಮೂವರು ಸಾವನ್ನಪ್ಪಿದ್ದು , 60 ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ನಂತರಗೌಹಾಟಿಯ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದು ಉಗ್ರರ ನಿಯೋಜಿತ ಕೃತ್ಯವಾಗಿದೆ ಎಂದು ಅಸ್ಸಾಂ ನ ಡಿಐಜಿ ಹೇಳಿಕೆ ನೀಡಿದ್ದಾರೆ. ಅಸ್ಸಾಂ ದುರಂತದ ಹಿಂದೆ ಕರ್ಬಿ ಲಂಗೊರಿ ನ್ಯಾಷನಲ್ ಲಿಬರೇಷನ್ ಫ್ರಂಟ್ ನ ಕೈವಾಡವಿರುವ ಸಾಧ್ಯತೆಯೂ ಇದೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.ಅ.30 ರಂದು ಅಸ್ಸಾಂನ ಬಾಂಬ್ ಸ್ಫೋಟದಲ್ಲಿ ಸುಮಾರು 95 ಜನ ಸಾವನ್ನಪ್ಪಿದ್ದರು. ಸುಮಾರು 300 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications