ನಗರದಲ್ಲಿ ಸಿಲೆಂಡರ್ ಸ್ಫೋಟ ಇಬ್ಬರ ಸಾವು
ಬೆಂಗಳೂರು, ನ. 21 : ಸಿಲೆಂಡರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿರುವ ಘಟನೆ ನಗರದ ಮಡಿವಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪಿಜಿಯೊಂದರಲ್ಲಿ ಶುಕ್ರವಾರ ನಡೆದಿದೆ. ಶಿವು ಮತ್ತು ಮಣಿಕಂಠ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.
ಮಡಿವಾಳದ ಮಾರುತಿನಗರದಲ್ಲಿ ಸರಳ ಎಂಬುವವರು ಈ (paying guest)ಪಿಜಿಯನ್ನು ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಮಹಡಿಯ ಮೇಲೆ ಅಡುಗೆ ಮಾಡುವ ಸಲುವಾಗಿ ಖಾಲಿಯಾಗಿದ್ದ ಸಿಲೆಂಡರ್ ತೆಗೆದು ಇನ್ನೊಂದು ಸಿಲೆಂಡರ್ ಜೋಡಿಸಿದ ಶಿವು ಮತ್ತು ಮಣಿಕಂಠ ಎಂಬುವವರು ಅಡುಗೆ ಮಾಡಲು ಆರಂಭಿಸಿದ್ದಾರೆ. ಆದರೆ ಹೊಸದಾಗಿ ಜೋಡಿಸಿದ ಸಿಲೆಂಡರ್ ಮುಚ್ಚಳವನ್ನು ಸರಿಯಾಗಿ ಹಾಕದ ಕಾರಣ ಗ್ಯಾಸ್ ಲೀಕ್ ಆಗಿ ಸಿಲೆಂಡರ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಕಂಠ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಿವು ಎಂಬುವವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಈ ಪಿಜಿಯಲ್ಲಿ ಸುಮಾರು 45 ಮಹಿಳೆಯರು ವಾಸಿಸುತ್ತಿದ್ದಾರೆ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications