ಆರ್ಎಸ್ಎಸ್ ಭಯೋತ್ಪಾದಕ ಸಂಘಟನೆ ಅಲ್ಲ
ಲಂಡನ್, ನ. 19 : ಆರ್ಎಸ್ಎಸ್, ಭಜರಂಗದಳ ಸಂಘಟನೆಗಳು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಬ್ರಿಟನ್ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ. ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಗಳು ಸ್ಫೋಟದಲ್ಲಿ ಕೈವಾಡವಿರುವ ಅಂಶ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸಂಘ ಪರಿವಾರದ ಎಲ್ಲ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುವ ಚರ್ಚೆ ಭಾರತದಲ್ಲಿ ಸಾಕಷ್ಟು ನಡೆದಿರುವ ಬೆನ್ನಲ್ಲೇ ಬ್ರಿಟನ್ ಸರ್ಕಾರ ನೀಡಿರುವ ಹೇಳಿಕೆಗೆ ಭಾರಿ ಮಹತ್ವದ ಬಂದಿದೆ. ಈ ಸಂಘಟನೆಗಳ ಸದಸ್ಯರು ಬ್ರಿಟನ್ ನಲ್ಲಿ ಇರುವುದಕ್ಕೆ ನಿಷೇಧ ಹೇರುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆರ್ಎಸ್ಎಸ್ ಮತ್ತು ಭಜರಂಗದಳ ಸಂಘಟನೆಗಳು ಭಯೋತ್ಪಾದಕ ಸಂಘಟನೆಗಳಲ್ಲ. ಈ ಎರಡು ಸಂಘಟನೆಗಳ ಕಾರ್ಯಕರ್ತರಿಗೆ ವೀಸಾ ನೀಡಲು ನಿರಾಕರಿಸುವುದಿಲ್ಲ ಎಂದು ವಿದೇಶಾಂಗ ರಾಜ್ಯ ಸಚಿವ ಲಾರ್ಡ್ ಮಲ್ಲೋಚ್ ಬ್ರೌನ್ ಲಂಡನ್ ನ ಹೌಸ್ ಆಫ್ ಲಾರ್ಡ್ ನಲ್ಲಿ ಈ ಹೇಳಿಕೆ ನೀಡಿದ್ದಾರೆ.
ಈ ಎರಡು ಸಂಘಟನೆಗಳನ್ನು ಭಾರತ ಇಲ್ಲವೇ ಬ್ರಿಟನ್ ನಲ್ಲಿ ನಿಷೇಧಿಸಿಲ್ಲ. ಹೀಗಿರುವಾಗ ವೀಸಾ ನೀಡಿಕೆಯಲ್ಲಿ ವಿನಾಕಾರಣ ವಿಳಂಬ ಮಾಡುವುದು, ಆರೋಪ ಹೊರಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಯಾವ ಸಂಘಟನೆಯನ್ನು ನಿಷೇಧಿಸಬೇಕಾದರೆ ಸರಿಯಾದ ಪುರಾವೆಗಳು ಜೊತೆ 2000 ಭಯೋತ್ಪಾದನೆ ಕಾಯಿದೆ ಅಡಿಯಲ್ಲಿ ಗೊತ್ತುಪಡಿಸಿರಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications