ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ 1
ಬೆಂಗಳೂರು, ನ. 8 : ಅಕ್ಟೋಬರ್ 22ರಂದು ಉಡಾವಣೆಗೊಂಡಿದ್ದ ಭಾರತದ ಪ್ರಪ್ರಥಮ ವ್ಯೋಮನೌಕೆ ಚಂದ್ರಯಾನ 1 ಇಂದು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು. ಭಾರತ ನಿರ್ಮಿತ ಕೃತಕ ಉಪಗ್ರಹವೊಂದು ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ಚಂದ್ರನ ಕಕ್ಷೆಯನ್ನು ತಲುಪಿದ್ದು ಇದೇ ಪ್ರಥಮ.
ಇಂದು ಸರಿಯಾಗಿ 16 ಗಂಟೆಗೆ 51 ನಿಮಿಷಕ್ಕೆ ದ್ರವ ಇಂಜಿನನ್ನು 817 ಸೆಕೆಂಡ್ ಗಳ ಕಾಲ ಫೈರ್ ಮಾಡಲಾಯಿತು. ಚಂದ್ರಯಾನ 1 ಚಂದ್ರನಿಂದ 500 ಕಿ.ಮೀ. ದೂರದ ಅಂತರದಲ್ಲಿದ್ದಾಗ ದ್ರವ ಇಂಜಿನನ್ನು ಫೈರ್ ಮಾಡಲಾಗಿದೆ. ನೌಕೆ ಇನ್ನು ಮುಂದೆ ಚಂದ್ರನ ಗುರುತ್ವಾಕರ್ಷಣೆಗೆ ಒಳಪಡಲಿದೆ. ಈ ಪ್ರಕ್ರಿಯೆಯನ್ನು ಎರಡು ಡಿಶ್ ಆಂಟೆನಾಗಳ ಸಹಾಯದಿಂದ ಬ್ಯಾಲಾಳುವಿನಲ್ಲಿರುವ ಇಸ್ರೋ ಟೆಲಿಮೆಟ್ರಿಯ ಚಂದ್ರಯಾನ 1 ನಿಯಂತ್ರಣಾ ಕೇಂದ್ರದಿಂದ ನಡೆಸಲಾಯಿತು.
ಮುಂದಿನ ಎರಡು ವರ್ಷಗಳ ಕಾಲ ಚಂದ್ರಯಾನ 1 ವ್ಯೋಮನೌಕೆ ಚಂದ್ರನನ್ನು ಪರಿಭ್ರಮಣ ಮಾಡಲಿದೆ. ಚಂದ್ರನ ಅತಿ ಸಮಿಪ ಅಂದರೆ 504 ಕಿ.ಮೀ. ದೂರದಲ್ಲಿ ಮತ್ತು ಅತಿ ದೂರ ಅಂದರೆ 7502 ಕಿ.ಮೀ. ದೂರದಲ್ಲಿ ನೌಕೆ ಸುತ್ತಲಿದೆ. ಚಂದ್ರನ ಒಂದು ಸುತ್ತು ಸುತ್ತಲು ನೌಕೆ 11 ಗಂಟೆ ತೆಗೆದುಕೊಳ್ಳುತ್ತದೆ. ಚಂದ್ರಯಾನ 1 ಎರಡು ವರ್ಷಗಳ ಕಾಲ ಚಂದ್ರನ ಮೇಲೆ ನೀರಿನ ಮತ್ತು ಹೀಲಿಯಂ ಅನಿಲದ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.
ಚಂದ್ರಯಾನ 1 ನೌಕೆಯ ಎಲ್ಲ ಕಾರ್ಯಗಳು ಅತ್ಯಂತ ಸುಗಮವಾಗಿ ಸಾಗುತ್ತಿವೆ ಎಂದು ಇಸ್ರೋ ವಿಜ್ಞಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಚಂದ್ರನ ಕಕ್ಷೆ ಯಶಸ್ವಿಯಾಗಿ ತಲುಪಿದ್ದರಿಂದ ಭಾರತದ ವಿಜ್ಞಾನಿಗಳ 9 ವರ್ಷಗಳ ಕನಸು ಸಾಕಾರಗೊಂಡಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications