ಚದುರಂಗದ ವಿಶ್ವನಾಥನಾಗಿ ಮತ್ತೆ ಆನಂದ್
ಬಾನ್, ಅ. 30 : ವಿಶ್ವ ಚದುರಂಗ ಲೋಕದಲ್ಲಿ ಭಾರತ ಮತ್ತೊಮ್ಮೆ ಶ್ರೇಷ್ಠತೆ ಮೆರೆದಿದೆ. ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಒಟ್ಟು 6.5 ಪಾಯಿಂಟ್ ಸಂಗ್ರಹಿಸಿದ ಚೆನ್ನೈನ ಆಟಗಾರ ಆನಂದ್ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಹಿಂದಿಕ್ಕಿ ಈ ಗೌರವಕ್ಕೆ ಕಾರಣರಾದರು. ಕೇವಲ 4.5 ಪಾಯಿಂಟ್ ಗಳಿಸಿದ ಕ್ರಾಮ್ನಿಕ್ ನಿರಾಶೆ ಅನುಭವಿಸಿದರು. 2007 ರಲ್ಲಿ ಟೆಹರಾನ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್ ಕಿರೀಟ ಕೂಡ ವಿಶ್ವನಾಥನ್ ಆನಂದ ಪಾಲಾಗಿತ್ತು. 2000ರಲ್ಲಿ ಆನಂದ ಮೊದ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಬುಧವಾರ ರಾತ್ರಿ ನಡೆದ 11 ನೇ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುತ್ತಿದ್ದಂತೆಯೇ ಈ ವಿಶ್ವ ಶ್ರೇಷ್ಠ ಗೌರವಕ್ಕೆ ಭಾಜನರಾದರು. 12 ಸುತ್ತುಗಳ ಈ ಚಾಂಪಿಯನ್ ಷಿಪ್ ನಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಆನಂದ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಚಾಂಪಿಯನ್ ಷಿಪ್ ಗೂ ಮೊದಲು ಮಾಡಿಕೊಂಡಿರುವ ಒಪ್ಪಂದಂತೆ ಉಭಯ ಆಟಗಾರರು ಪ್ರಶಸ್ತಿಯ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ. 1.5 ಮಿಲಿಯನ್ ಯೂರೋ ಮೊತ್ತವನ್ನು ಪ್ರಶಸ್ತಿ ಹೊಂದಿದೆ.
(ಏಜೆನ್ಸೀಸ್)












Click it and Unblock the Notifications