ವಾರಾಂತ್ಯದೊಳಗೆ ತೈಲ ದರ ಇಳಿಕೆ : ಕೇಂದ್ರ
ನವದೆಹಲಿ, ಅ. 23 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಇಂಧನ ದರವನ್ನು ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ವಾರಾಂತ್ಯದೊಳಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೆವೋರಾ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಗೆ 68 ಡಾಲರ್ ಗೆ ಬಂದು ಇಳಿದಿದೆ. ಈ ಹಿಂದೆ ಪ್ರತಿ ಬ್ಯಾರಲ್ ಬೆಲೆ 147 ಡಾಲರ್ ಗೆ ಏರಿತ್ತು. ಮುರಳಿ ದೆವೋರಾ ಕೂಡ ಕಚ್ಚಾ ತೈಲದ ಬೆಲೆ 67 ಡಾಲರ್ ಗೆ ಇಳಿದಾಗ ಮಾತ್ರ ತೈಲೋತ್ಪನ್ನಗಳ ಬೆಲೆ ಇಳಿಸುವುದಾಗಿ ವಾಗ್ದಾನ ನೀಡಿದ್ದರು.
ಬೆಲೆಗಳಲ್ಲಿ ಕಡಿತಗೊಳಿಸಲು ವಾರದ ಹಿಂದೆಯೇ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ. ಆದರೆ ಯಾವ ಆಧಾರದ ಮೇಲೆ ಇಳಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಿಲ್ಲ. ಆದ್ದರಿಂದ ಇನ್ನೊಂದು ವಾರದೊಳಗೆ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಬಿಜೆಪಿ ಸಂಸದ ಬ್ರಿಜ್ ಕಿಶೋರ್ ತ್ರಿಪಾಠಿ ಅವರ ಪ್ರಶ್ನೆಗೆ ಸಚಿವ ದಿಯೋರಾ ಉತ್ತರಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ತರಕಾರಿ ಸೇರಿದಂತೆ ಇತರ ಬಳಕೆಯ ಬೆಲೆಗಳು ಏರಿರುವುದರಿಂದ ಸಾಮಾನ್ಯ ಜನತೆ ಬಸವಳಿದಿದ್ದಾರೆ. ತೈಲೋತ್ಪನ್ನಗಳ ಬೆಲೆ ಇಳಿಕೆ ಸಾಮಾನ್ಯರನ್ನು ನಿರಾಳವಾಗಿಸಲಿದೆ.
(ದಟ್ಸ್ ಕನ್ನಡ ವಾರ್ತೆ)
ತೈಲ ಬೆಲೆ ಹೆಚ್ಚಳವಿಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆ
ಪೆಟ್ರೋಲ್ ಅಭಾವದ ದಿನಗಳು ಬರಲಿವೆ?












Click it and Unblock the Notifications