ಶೇ.10ರಷ್ಟು ಸಿಬ್ಬಂದಿ ಕಡಿತ ಪ್ರಕಟಿಸಿದಯಾಹೂ
ಸ್ಯಾನ್ ಫ್ರಾನ್ಸಿಸ್ಕೊ, ಅ.22: ಅಂತರ್ಜಾಲ ದೈತ್ಯ ಕಂಪನಿ ಯಾಹೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಬುಧವಾರ ಪ್ರಕಟಿಸಲಾದ ತನ್ನ ತ್ರೈಮಾಸಿಕ ಲಾಭಾಂಶದಲ್ಲಿ ಶೇ.64ರಷ್ಟು ಕುಸಿತ ಕಂಡಿದೆ. ಆರ್ಥಿಕ ಸಂಕಷ್ಟದಿಂದ ಹೊರಬರಲು ತನ್ನ 14,300 ನೌಕರರಲ್ಲಿ ಶೇ.10ರಷ್ಟು ಮಂದಿಯನ್ನು ಮನೆಗೆ ಕಳುಹಿಸಲು ಯಾಹೂ ನಿರ್ಧರಿಸಿದೆ.
ಕಳೆದ ವರ್ಷ ಇದೇ ಸಮಯಕ್ಕೆ 151 ದಶಲಕ್ಷ ಡಾಲರ್ ಅಥವಾ ಪ್ರತಿ ಷೇರಿಗೆ 11 ಸೆಂಟ್ ಗಳಷ್ಟಿದ್ದ ಕಂಪನಿಯ ಲಾಭಾಂಶ ಈ ವರ್ಷ 54 ದಶಲಕ್ಷ ಡಾಲರ್ ಅಥವಾ ಪ್ರತಿ ಷೇರಿಗೆ 4 ಸೆಂಟ್ ಗಳಿಗೆ ಇಳಿದಿದೆ. ವಾರ್ಷಿಕ ಖರ್ಚುವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಸಿಬ್ಬಂದಿ ಕಡಿತಕ್ಕೆ ಮುಂದಾಗಿರುವುದಾಗಿ ಕಂಪನಿ ತಿಳಿಸಿದೆ.
ಮೂರನೆ ತ್ರೈಮಾಸಿಕದಲ್ಲಿ ಆರ್ಥಿಕ ಪರಿಸ್ಥಿತಿ ಹಾಗೂ ಆನ್ ಲೈನ್ ಜಾಹೀರಾತುಗಳು ಆಶಾಜನಕವಾಗಿರಲಿಲ್ಲ. ವರ್ಷಪೂರ್ತಿ ನಾವು ಬಂಡವಾಳ ಹೂಡಿಕೆಯನ್ನು ಸರಿದೂಗಿಸಿಕೊಂಡು ಖರ್ಚುವೆಚ್ಚಗಳನ್ನು ನಿರ್ವಹಿಸಿದ್ದೇವೆ. ಖರ್ಚುಗಳನ್ನು ಕಡಿಮೆ ಮಾಡಿಕೊಂಡು ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿರುವುದಾಗಿ ಯಾಹೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆರ್ರಿ ಯಂಗ್ ತಿಳಿಸಿದ್ದಾರೆ.
ಕಂಪನಿ ಹೆಚ್ಚು ಲಾಭಾಂಶ ಗಳಿಸಬೇಕೆಂಬ ಒತ್ತಡದಲ್ಲಿ ಯಂಗ್ ಸಿಲುಕಿದ್ದಾರೆ. ಷೋರೊಂದಕ್ಕೆ 33 ಡಾಲರ್ ಕೊಟ್ಟು ಯಾಹೂ ಕಂಪನಿಯನ್ನು ಮೈಕ್ರೊಸಾಫ್ಟ್ ಖರೀದಿಸಲು ಮುಂದಾಗಿತ್ತು. ಆದರೆ ಈ ಪ್ರಸ್ತಾವನೆಯನ್ನು ಯಾಹೂ ಸಾರಾಸಗಟಾಗಿ ತಳ್ಳಿಹಾಕಿತ್ತು. ಅಂದಿನಿಂದ ಯಾಹೂ ಷೇರಿನ ಬೆಲೆಗಳು ಇಳಿಮುಖವಾಗುತ್ತಲೇ ಇವೆ. ಪ್ರಸ್ತುತ ಯಾಹೂ ಕಂಪನಿಯ ಷೋರೊಂದರ ಬೆಲೆ 12 ಡಾಲರ್ ಗಳಷ್ಟಿದೆ.
(ಏಜೆನ್ಸೀಸ್)
ಸಿಬ್ಬಂದಿ ಕಡಿತಕ್ಕೆ ಮುಂದಾದ ಯಾಹೂ, ಗೂಗಲ್












Click it and Unblock the Notifications