ಲಾರಾ ದಾಖಲೆ ಮುರಿದ ಸಚಿನ್ ತೆಂಡೂಲ್ಕರ್
ಮೊಹಾಲಿ, ಆ.17: ಭಾರತದ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ 12000* ರನ್ ಗಳಿಸುವ ಮೂಲಕ ಲಾರಾ ದಾಖಲೆಯನ್ನು ಮುರಿದರು. ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ನ ಮೊದಲ ದಿನದಲ್ಲಿ ಈ ಗುರಿ ಮುಟ್ಟಿ ದಾಖಲೆ ನಿರ್ಮಿಸಿದರು.
ಒಟ್ಟು 152 ಟೆಸ್ಟ್ ಪಂದ್ಯಗಳಲ್ಲಿ ಸರಾಸರಿ 54.23 ರನ್ ಗಳನ್ನು ಸಚಿನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ ಇದುವರೆಗೂ ಒಟ್ಟು 39 ಶತಕಗಳು ಹಾಗೂ 49 ಅರ್ಧ ಶತಕಗಳು ಜಮೆಯಾಗಿವೆ. ಬಾಂಗ್ಲಾದೇಶದ ವಿರುದ್ಧ ಗಳಿಸಿದ 248 ರನ್ ಗಳು ಸಚಿನ್ ಗಳಿಸಿದ ಅತಿಹೆಚ್ಚ್ಚು ಮೊತ್ತ. ಡಿಸೆಂಬರ್ 2004ರಲ್ಲಿ ಢಾಕಾದ ಬಂಗಬಂಧು ಕ್ರೀಡಾಂಗಣದಲ್ಲಿ ಬಾಂಗ್ಲಾ ವಿರುದ್ಧ 248 ರನ್ ಗಳಿಸಿ ಸುನಿಲ್ ಗವಾಸ್ಕರ್ ದಾಖಲೆ ಸರಿಗಟ್ಟಿದ್ದರು.
ಬೆಂಗಳೂರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬ್ರಿಯಾನ್ ಲಾರಾ ದಾಖಲೆಯನ್ನು ಮುರಿಯುವ ಅವಕಾಶ ಸಿಕ್ಕಿತ್ತು. 49 ರನ್ ಗಳಿಗೆ ಔಟ್ ಆಗುವ ಮೂಲಕ 11953 ಸಂಖ್ಯೆಯನ್ನ್ನು ತಲುಪಲು ಸಾಧ್ಯವಾಗಿರಲಿಲ್ಲ. ಸಚಿನ್ ರ ಈ ಸಾಧನೆಯನ್ನು ಭಾರತ ಕ್ರಿಕೆಟ್ ತಂಡದ ನಾಯಕ ಅನಿಲ್ ಕುಂಬ್ಳೆ ಮುಕ್ತ ಕಂಠದಿಂದ ಹೊಗಳಿದ್ದಾರೆ. 'ಡ್ರೆಸ್ಸಿಂಗ್ ಕೊಠಡಿಯಲ್ಲಿ ಹಾಗೂ ಕೊಠಡಿಯ ಹೊರಗಿನಿಂದ ಸಚಿನ್ ರ ಪ್ರತಿ ರನ್ ಗಳನ್ನು ಕುತೂಹಲದಿಂದ ನೋಡಿ ಆನಂದಿಸಿದ್ದೇನೆ' ಎಂದು ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ. ಇಂದು ಅನಿಲ್ ಕುಂಬ್ಳೆಗೆ ಹುಟ್ಟು ಹಬ್ಬದ ಸಂಭ್ರಮ.ಭುಜದ ನೋವಿನಿಂದ ಬಳಲುತ್ತಿರುವ ಅವರು ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ.
'ಸಚಿನ್ ಒಬ್ಬ ಅದ್ಭುತ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತು.ಬೆಂಗಳೂರಿನ ಟೆಸ್ಟ್ ನಿಂದಲೂ ಅವರಿಗೆ ಈ ಗುರಿ ತಲುಪುವ ಹಸಿವು ಕಾಡುತ್ತಿತ್ತು. ಅಂದಿನಿಂದ ಅವರು ಉತ್ತಮವಾಗಿ ಆಡುತ್ತ್ತಿದ್ದಾರೆ' ಎಂದು ಸಚಿನ್ ರ ದಾಖಲೆಗೆ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ಕ್ರೀಡಾವಾರ್ತೆ)
ಮೊಹಾಲಿಯಲ್ಲಿ ತಲೆಕೆಳಗಾಗಿ ಹಾರಾಡಿದ ರಾಷ್ಟ್ರಧ್ವಜ!












Click it and Unblock the Notifications