ಟಾಟಾ ನ್ಯಾನೊಗೆ ಪ್ರತಿಸ್ಪರ್ಧಿಯಾಗಿ ಅಜಂತಾ ಕಾರು
ಅಹಮದಾಬಾದ್, ಅ.14: ಟಾಟಾ ನ್ಯಾನೋ ಕಾರಿಗೆ ಎಲ್ಲ ವಿಧಗಳಲ್ಲೂ ಸವಾಲೊಡ್ಡುವಂತಹ ಮತ್ತೊಂದು ಕಾರು ಭಾರತದ ರಸ್ತೆಗಳಿಗೆ ಇಳಿಯಲಿದೆ. ಗೋಡೆ ಗಡಿಯಾರ, ಕೈ ಗಡಿಯಾರಗಳಿಗೆ ಹೆಸರಾದ ಅಜಂತಾ ಕಂಪನಿ ಅಭಿವೃದ್ಧಿ ಪಡಿಸಿರುವ ಎಲೆಕ್ಟ್ರಿಕ್ ಕಾರಿಗೆ 'ಒರೆವಾ ಇ' ಎಂದು ಹೆಸರಿಸಲಾಗಿದೆ. ಗುಜರಾತ್ ನ ರಾಜ್ ಕೋಟ್ ನ ಮಾರಾಟ ಮಳಿಗೆಯಲ್ಲಿ ಈ ಕಾರನ್ನು ಈಗಾಗಲೆ ಪ್ರದರ್ಶನಕ್ಕೆ ಇಡಲಾಗಿದೆ.
ಕೇವಲ 1 ಲಕ್ಷ ರು.ಗಳಿಗೆ ಕಾರು ಕೊಡುವುದಾಗಿ ಟಾಟಾ ಈಗಾಗಲೇ ವಾಹನ ಪ್ರಿಯರಿಗೆ ಅಭಯಹಸ್ತ ನೀಡಿದೆ. ಅಕ್ಟೊಬರ್ ತಿಂಗಳಲ್ಲಿ ಟಾಟಾ ನ್ಯಾನೊ ಕಾರು ಭಾರತದ ರಸ್ತೆಗಳಿಗೆ ದಾಂಗುಡಿ ಇಡಬೇಕಿತ್ತು.ಆದರೆ ಸಿಂಗೂರಿನಲ್ಲಿ ಭೂವಿವಾದ ಭುಗಿಲೆದ್ದು ನ್ಯಾನೋ ಕಾರು ಗುಜರಾತಿನತ್ತ ಪ್ರಯಾಣ ಬೆಳೆಸ ಬೇಕಾಯಿತು. ಈ ಕಾರಣಕ್ಕೆ ನ್ಯಾನೊ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಜಂತಾ ಕಂಪನಿ ಅದೇ ಮಾದರಿಯ ಸಣ್ಣ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹೊರಟಿರುವುದು ಟಾಟಾ ಸಂಸ್ಥೆಯ ರಕ್ತದ ಒತ್ತಡ ಏರಲು ಕಾರಣವಾಗಿದೆ.
ಅಜಂತಾ ಅಭಿವೃದ್ಧಿ ಪಡಿಸಿರುವ ಎಲೆಕ್ಟ್ರಿಕ್ ಕಾರು ಒರೆವಾ ಸೂಪರ್ ನ ಬೆಲೆ ಸಹ ಕೇವಲ ರು.1 ಲಕ್ಷ. ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿರುವ ಪ್ರಥಮ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಜಂತಾ ಸಮುದಾಯದ ಸೌರಾಷ್ಟ್ರ ಮೂಲದ ಗಡಿಯಾರ ತಯಾರಕರೊಬ್ಬರು ಈ ಕಾರನ್ನು ರೂಪಿಸಿದ್ದಾರೆ. ಈಗಾಗಲೆ ಕುಚ್ ಜಿಲ್ಲೆಯಲ್ಲಿ ಒರೆವಾ ಸೂಪರ್ ಕಾರಿನ ತಯಾರಿಕ ಘಟಕ ಒರೆವಾ ಉತ್ಪಾದನೆಯನ್ನು ಪ್ರಾರಂಭಿಸಿದೆ.
ಗಗಕ್ಕೇರುತ್ತಿರುವ ಪೆಟ್ರೋಲ್ ಬೆಲೆ ಗ್ರಾಹಕರನ್ನು ಕಂಗೆಡಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಎಲೆಕ್ಟ್ರಿಕ್ ವಾಹನ ಆರ್ಥಿಕ ಲಾಭದಾಯಕವಾಗಲಿದೆ. ಪ್ರದರ್ಶನಕ್ಕಿಟ್ಟಿರುವ ಪ್ರಥಮ ವಾಹನ ಇದಾಗಿದೆ. ಇದಕ್ಕಿಂತಲೂ ಹೆಚ್ಚಿಗೆ ಏನನ್ನು ಮಾತನಾಡಬಾರದೆಂದು ಕಟ್ಟಪ್ಪಣೆ ವಿಧಿಸಿರುವ ಕಾರಣ ನಾನು ಹೆಚ್ಚಿನ ವಿವರಗಳನ್ನು ಹೇಳಲಾರೆ ಎನ್ನುತ್ತಾರೆ ಒರೆವಾ ಆಟೋಮೊಬೈಲ್ಸ್ ನ ಯೋಗೇಶ್ ಟ್ಯಾಂಕ್. ಅಜಂತಾ ಕಂಪನಿಯ ಒರೆವಾ ಕಾರು ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ.
ಪ್ರಸ್ತುತ ಭಾರತ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ರೇವಾ ಕಂಪನಿಯ ಎಲೆಕ್ಟ್ರಿಕ್ ಕಾರು ಮಾತ್ರ ಮಾರಾಟವಾಗುತ್ತಿದೆ. ಈಗ ಮತ್ತಷ್ಟು ಅಗ್ಗವಾಗಿ ಭಾರತೀಯ ಗ್ರಾಹಕರನ್ನು ಉದ್ದೇಶವಾಗಿಟ್ಟುಕೊಂಡು ಒರೆವಾ ಇ ಕಾರನ್ನು ಅಜಂತಾ ಕಂಪನಿ ಬಿಡುಗಡೆ ಮಾಡುತ್ತಿದೆ. ಅಜಂತಾ ಮುಖ್ಯವಾಗಿ ಗಡಿಯಾರಗಳನ್ನು ತಯಾರಿಸುವ ಕಂಪನಿ. ಹಾಗೆಯೇ ಆರ್ಪೆಟ್ ಬ್ರಾಂಡ್ ಹೆಸರಿನಡಿ ಕೆಲವೊಂದು ಗೃಹೋಪಯೋಗಿ ಎಲೆಕ್ಟ್ರಿಕ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಕಳೆದ ವರ್ಷವಷ್ಟೆ ಸಣ್ಣ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಕೈಹಾಕಿತ್ತು. ಈಗ ಟಾಟಾ ನ್ಯಾನೊ ಕಾರಿಗೆ ಸವಾಲೊಡ್ಡುವಂತೆ ಕೇವಲ ರು. 85,000 ರಿಂದ ರು.1,00,000 ಬೆಲೆಯ ನಡುವೆ ಹವಾನಿಯಂತ್ರಿತವಲ್ಲದ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುತ್ತಿದೆ.
(ಏಜೆನ್ಸೀಸ್)












Click it and Unblock the Notifications