ರಾಹುಲ್ ದ್ರಾವಿಡ್ ಗೆ 'ಗೋಡೆ'ಯ ಉಡುಗೊರೆ
ಬೆಂಗಳೂರು, ಅ.8: ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 10,000 ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ನೆನಪಿಸುವ ಗೋಡೆಯೊಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದ್ದುನಿಂತಿದೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ಕೆಎಸ್ ಸಿಎ ಹಾಗೂ ಸ್ಕೈಲೈನ್ ಬಿಲ್ಡರ್ಸ್ ಈ ಗೋಡೆಗೆ 'ದಿ ವಾಲ್' ಎಂದೇ ಹೆಸರಿಸಿವೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೋಮವಾರ 'ದಿ ವಾಲ್' ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಲೆ, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ ಸಿಎ) ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಉಪಸ್ಥಿತರಿದ್ದರು. ಈ ಗೋಡೆಯು 15 ಅಡಿ ಎತ್ತರ ಹಾಗೂ 27 ಅಡಿ ಅಗಲವಿದ್ದು ಇದರ ನಿರ್ಮಾಣಕ್ಕಾಗಿ 10,000 ಇಟ್ಟಿಗೆಗಳನ್ನು ಬಳಸಲಾಗಿದೆ. ಕವರ್ ಡ್ರೈವ್ ಭಂಗಿಯ ಶಿಲ್ಪ ಹೊಂದಿದ್ದು, ಗೋಡೆಗೆ ವಿದ್ಯುನ್ಮಾಲ ಪರದೆಯನ್ನು ಅಳವಡಿಸಲಾಗಿದೆ. ದ್ರಾವಿಡ್ ಪ್ರತಿ ರನ್ ಗಳಿಸಿದಾಗ ಒಟ್ಟು ರನ್ ಇಲ್ಲಿ ಮೂಡುತ್ತದೆ.
(ದಟ್ಸ್ ಕನ್ನಡ ಕ್ರೀಡಾವಾರ್ತೆ)












Click it and Unblock the Notifications