ಪರಿಸರ ಸ್ನೇಹಿ ಸೌರ ಅಟೋ ರಿಕ್ಷಾ ರಸ್ತೆಗೆ
ನವದೆಹಲಿ, ಅ.3: ಗಾಂಧಿ ಜಯಂತಿಯ ಅಂಗವಾಗಿ ಪರಿಸರ ಸ್ನೇಹಿ ಸೌರವಿದ್ಯುತ್ ಚಾಲಿತ ಆಟೋರಿಕ್ಷಾವನ್ನು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷೀತ್ ಅವರು ಅನಾವರಣಗೊಳಿಸಿದರು.ಇಲ್ಲಿನ ಚಾಂದಿನಿ ಚೌಕ್ ಮೆಟ್ರೋ ನಿಲ್ದಾಣದ ಬಳಿಯ ಯದ್ಬೀರ್ ಸಿಂಗ್ ಪಾರ್ಕ್ ನಲ್ಲಿ ನಡೆದ ಸಮಾರಂಭದಲ್ಲಿ ಸೊಲೆಕ್ಷಾ ಎಂದು ಹೆಸರಿಸಲಾಗಿರುವ ಸೌರ ಚಾಲಿತ ಆಟೋಗಳನ್ನು ಪ್ರಾಯೋಗಿಕವಾಗಿ ರಸ್ತೆಗಿಳಿಸಲಾಯಿತು.
ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ಸಚಿವ ಕಪಿಲ್ ಸಿಬಲ್ ಹಾಗೂ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ(CSIR) ನ ನಿರ್ದೇಶಕ ಸಮೀರ್ ಬ್ರಹ್ಮಚಾರಿ ಈ ಸಮಯದಲ್ಲಿ ಉಪಸ್ಥಿತರಿದ್ದರು.
ಕೇವಲ 8 ತಿಂಗಳ ಅವಧಿಯಲ್ಲಿ ಸಂಪೂರ್ಣ ದೇಶಿ ತಂತ್ರಜ್ಞರನ್ನು ಬಳಸಿಕೊಂಡು ಸೊಲಾಕ್ಷ ರಿಕ್ಷಾವನ್ನು ತಯಾರಿಸಲಾಗಿದೆ. ಕಾರ್ಪೊರೆಟ್ ಸಂಸ್ಥೆಗಳಿಂದ ಈ ಬಗ್ಗೆ ಇನ್ನೂ ಬೇಡಿಕೆ ಬಂದಿಲ್ಲ.ಆದರೆ ಲಾಭ ರಹಿತ ಎನ್ ಜಿಒಗಳು, ಪರಿಸರಸ್ನೇಹಿ ಸಂಸ್ಥೆಗಳ ಸಹಾಯದಿಂದ ಈಗಿನ ವಿನ್ಯಾಸಕ್ಕೆ ಹೆಚ್ಚಿನ ಮೆರಗನ್ನು ನೀಡಲು ಯತ್ನಿಸಲಗುವುದು ಎಂದು ಸಮೀರ್ ಹೇಳಿದರು.
ಈ ರಿಕ್ಷಾದಲ್ಲಿಡ್ರೈವರ್ ಅಲ್ಲದೆ ಇಬ್ಬರು ಆರಾಮವಾಗಿ ಕುಳಿತುಕೊಳ್ಳಬಹುದು. ಸುಮಾರು 15 ಕಿ.ಮೀ ಪ್ರತಿಗಂಟೆ ವೇಗದಲ್ಲಿ ಚಲಿಸುವ ಸಾಮರ್ಥ್ಯಹೊಂದಿರುತ್ತದೆ. ಸಾಮಾನ್ಯ ಆಟೋ ರಿಕ್ಷಾದ ದರದಲ್ಲೇ ಸೌರ ವಿದ್ಯುತ್ ಚಾಲಿತ ಆಟೋಗಳು ಲಭ್ಯವಾಗುವಂತೆ ಮಾಡಲಾಗುವುದು.ಈ ಮಾದರಿಯ ಆಟೋಗಳು ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಲು ಇನ್ನೂ 2-3 ವರ್ಷಗಳಾಗಬಹುದು ಎಂದು ಸಮೀರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications