ಮದ್ರಸಾಗಳಿಗೆ ಕೇಂದ್ರದಿಂದ ರು.325 ಕೋಟಿ
ನವದೆಹಲಿ, ಅ.3: ದೇಶದ ಮದ್ರಸಾಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ರು. 325 ಕೋಟಿಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಮದ್ರಸಾಗಳಲ್ಲಿ ಇದೇ ಮೊದಲ ಬಾರಿಗೆ ಇಂಗ್ಲಿಷ್ ಹಾಗೂ ಗಣಿತದ ವಿಷಯಗಳನ್ನು ಪರಿಚಯಿಸಲಾಗುತ್ತಿದೆ.
ಕೇಂದ್ರ ಆರ್ಥಿಕ ವ್ಯವಹಾರಗಳ ಸಮಿತಿ ಸಭೆಯಲ್ಲಿ ಇಂದು ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ವಹಿಸಿದ್ದರು. ಮದ್ರಾಸಾಗಳಲ್ಲಿ ಗುಣಮಟ್ಟದ ಶಿಕ್ಷವನ್ನು ನೀಡುವ ಯೋಜನೆಯನ್ನು ಪ್ರಧಾನಿ ಬಿಡುಗಡೆ ಮಾಡಿದರು.ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.
''ಈ ಒಂದು ಯೋಜನೆ ಸಾಂಪ್ರಾದಾಯಿಕ ಶಿಕ್ಷಣ ಸಂಸ್ಥೆಗಳಾದ ಮದ್ರಸಾಗಳು, ಮಕ್ತಬ್ ಗಳು ಹಾಗೂ ದರುಲುಲೂಮ್ಸ್ ಗಳಲ್ಲಿ ವಿಜ್ಞಾನ, ಗಣಿತಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಇಂಗ್ಲಿಷ್ ಭಾಷೆಗಳನ್ನು ಪರಿಚಯಿಸಲಾಗುತ್ತದೆ'' ಎಂದು ಚಿದಂಬರಂ ತಿಳಿಸಿದರು.''ಇದರಿಂದ ಮದ್ರಸಾಗಳಲ್ಲಿ ಒಂದನೆ ತರಗತಿಯಿಂದ ಹನ್ನೆರಡನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಪಡಿಸಲು ಸಾಧ್ಯವಾಗುತ್ತದೆ ''ಎಂದರು.
ರಾಷ್ಟ್ರೀಯ ಶಿಕ್ಷಣದ ಭಾಗವಾಗಿ ಈ ಯೋಜನೆಯನ್ನು ರಾಷ್ಟ್ರೀಯ ಮುಕ್ತ ಶಾಲೆಗಳೊಂದಿಗೆ(ಎನ್ ಐಒಎಸ್)ಅನುಸಂಧಾನ ಮಾಡಲು ನೆರವಾಗುತ್ತದೆ ಎಂದು ಚಿದಂಬರಂ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ದೇಶದಲ್ಲಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರ ಕೈಗೊಳ್ಳಲಾಯಿತು. ಹಾಗೆಯೇ ಕೆಲವು ವಿಶ್ವವಿದ್ಯಾಲಯಗಳನ್ನು ಉನ್ನತ ದರ್ಜೆಗೆ ಏರಿಸುವ ಕುರಿತು ಸಂಪುಟ ಸಭೆ ನಿರ್ಣಯ ಕೈಗೊಂಡಿತು.
(ಏಜೆನ್ಸೀಸ್)












Click it and Unblock the Notifications