ಮಣಿದ ನೋಕಿಯಾ : ಸೋನಿ ಕುಟುಂಬಕ್ಕೆ ಪರಿಹಾರ
ಬೆಂಗಳೂರು, ಸೆ. 29 : ಹಿರಿಯ ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದ ಸೋನಿ ಎಂಬ ಸಾಫ್ಟ್ ವೇರ್ ಇಂಜಿನಿಯರ್ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಲು ನೋಕಿಯಾ ಕಂಪನಿ ಮುಂದಾಗಿದ್ದು ಆಕೆಯ ಆತ್ಮಹತ್ಯೆಗೆ ಕಾರಣರಾಗಿದ್ದ ತೇಜ್ ಮತ್ತು ಸುಚಿನ್ ಎಂಬಿಬ್ಬರನ್ನು ಅಮಾನತು ಮಾಡಿದೆ.
ಇದು ಸೋನಿ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿದರ ಫಲ. ಸೋನಿ ಕೆಲಸ ಮಾಡುತ್ತಿದ್ದ ನೋಕಿಯಾ ಕಂಪನಿಯ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿದ ವೇದಿಕೆ ಕಾರ್ಯಕರ್ತರು ಸೋನಿಗೆ ಪರಿಹಾರ ಒದಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಪ್ರತಿಭಟನೆ ನಡೆಸಿದರು.
ಹಿರಿಯ ಸಹೋದ್ಯೋಗಿಗಳ ಕಿರುಕುಳದಿಂದ ಮಾನಸಿಕವಾಗಿ ಕುಗ್ಗಿದ್ದ ಸೋನಿ, 'ಕಾರ್ಯನಿರತ ಮಹಿಳೆಯರ ಪರವಾಗಿ ಯಾರಾದರೂ ಹೋರಾಟ ಮಾಡಬೇಕು, ಮಹಿಳೆಯರಿಗೆ ರಕ್ಷಣೆ ನೀಡಬೇಕು' ಎಂದು ಮರಣಪತ್ರದಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆರೋಪಿಗಳಾದ ತೇಜ್ ಮತ್ತು ಸುಚಿನ್ ಎಂಬುವರ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ 306ನೇ ಸೆಕ್ಷನ್ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸೋನಿ ಆತ್ಮಹತ್ಯೆ ಮಾಡಿಕೊಂಡ ನಂತರ ಅವರಿಬ್ಬರೂ ತಲೆಮರೆಸಿಕೊಂಡಿದ್ದಾರೆ.
ಅವರಿಬ್ಬರು ನೀಡುತ್ತಿದ್ದ ಕಿರುಕುಳದ ಬಗ್ಗೆ ಕಚೇರಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗೆ ಸೋನಿ ದೂರು ನೀಡಿದ್ದರೂ ತೇಜ್ ಮತ್ತು ಸುಚಿನ್ ವಿರುದ್ಧ ನೋಕಿಯಾ ಕಂಪನಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಸೋನಿ ಜೀವ ಕಳೆದುಕೊಂಡು ಅವರಿಗೆ ಪಾಠ ಕಲಿಸಲು ಮುಂದಾದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಮೇಲಧಿಕಾರಿಗಳ ಕಿರುಕುಳ : ಯುವತಿ ನೇಣಿಗೆ ಶರಣು












Click it and Unblock the Notifications