ಕಾರ್ಮಿಕರು ಮನೆಗೆ, ಐಟಿ ಮಂದಿ ಚೆನ್ನೈಗೆ
ಪುಣೆ, ಸೆ. 10 : ಹೊರಗುತ್ತಿಗೆ ಕೆಲಸ ನಿರ್ವಹಣೆಗೆ ಪುಣೆಯಲ್ಲಿ ಕಚೇರಿ ಜಾಗದ ಅಭಾವ ತೀವ್ರವಾಗಿ ತಲೆದೋರಿರುವ ಕಾರಣ ಇನ್ ಫೋಸಿಸ್ ತನ್ನ 3000 ಕೆಲಸಗಾರರನ್ನು ಚೆನ್ನೈಗೆ ವರ್ಗಾಯಿಸಲು ಗುರುವಾರ ನಿರ್ಧರಿಸಿದೆ. ವರ್ಗಾವಣೆಗೆ ಗುರಿಯಾಗುತ್ತಿರುವುವರೆಲ್ಲ ಕಂಪನಿಗೆ ಈಗಷ್ಟೆ ಸೇರಿರುವ ನವ ಯುವಕ ಯುವತಿಯರಾಗಿದ್ದಾರೆ.
ಪುಣೆಯ ಇನ್ಫಿ ಕಚೇರಿ ಇಲ್ಲಿನ ಹಿಂಜವಾಡಿ ಪ್ರದೇಶದಲ್ಲಿದೆ. ಇದೇ ಪ್ರದೇಶದಲ್ಲಿ ವಿಸ್ತರಣೆಯ ಎರಡನೇ ಹಂತದ ಹೆಜ್ಜೆಯಾಗಿ ಕಟ್ಟಡಗಳನ್ನು ಕಟ್ಟಲು ಇನ್ಫಿ ಯೋಜನೆ ರೂಪಿಸಿತ್ತು. ಆದರೆ ಕಟ್ಟಡ ಕಾರ್ಮಿಕರ ಅಭಾವ ದಿಢೀರನೆ ತಲೆದೋರಿರುವುದರಿಂದ ಅನ್ಯ ಮಾರ್ಗವಿಲ್ಲದೆ ಕೆಲಸಗಾರರನ್ನು ಚೆನ್ನೈಗೆ ವರ್ಗಾಯಿಸಬೇಕಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ವಲಸಿಗರ ವಿರುದ್ಧ ಮಹಾರಾಷ್ಟ್ರ ನಿರ್ಮಾಣ ಚಳವಳಿ(ಎಂಎನ್ ಎಸ್ )ಯ ರಾಜ್ ಠಾಕ್ರೆ ಗುಡುಗಿರುವ ಹಿನ್ನೆಲೆಯಿಂದಾಗಿಯೂ ಕಾರ್ಮಿಕರು ಊರು ಬಿಟ್ಟು ಹೋಗುತ್ತಿದ್ದಾರೆ. ಬಹುತೇಕ ಕಟ್ಟಡ ಕಾರ್ಮಿಕರು ಪುಣೆಗೆ ರಾಜ್ಯದ ಬೇರೆಬೇರೇ ಸ್ಥಳಗಳಿಂದ ಉದ್ಯೋಗ ಅನ್ನ ಆಹಾರ ಹುಡುಕಿ ಬಂದಿದ್ದವರು. ಈ ಬೆಳವಣಿಗೆಗಳಿಂದಾಗಿ ಪುಣೆ ಕಚೇರಿಯ ವಿಸ್ತರಣೆ ಯೋಜನೆಗಳು ಕನಿಷ್ಠ 6 ತಿಂಗಳು ಮುಂದೂಡಲ್ಪಡುತ್ತವೆ.
30,000 ಕ್ಕೂ ಹೆಚ್ಚು ಕೆಲಸಗಾರರಿಗೆ ಒಂದೇ ಕ್ಯಾಂಪಸ್ ನಲ್ಲಿ ಕೆಲಸಕ್ಕೆ ಜಾಗೆ ಕಲ್ಪಿಸುವ ಉದ್ದಿಶ್ಯ ಕಂಪನಿಯದು. ಆದರೆ, ಪ್ರತೀಕೂಲ ಪರಿಸ್ಥಿತಿ ಎದುರಾಗಿರುವುದರಿಂದ ಕೆಲಸಗಾರರನ್ನು ಉಳಿದ ಕೇಂದ್ರಗಳಿಗೆ ಕಳಿಸುವುದರ ಮೂಲಕ ಸ್ಥಳಾಭಾವ ಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದು ಮಾನವ ಸಂಪನ್ಮೂಲ ಇಲಾಖೆಯ ನಿರ್ದೇಶಕ ಮೋಹನ್ ದಾಸ್ ಪೈ ಹೇಳಿದರು.
(ದಟ್ಸ್ ಕನ್ನಡವಾರ್ತೆ)
ಈ ವರ್ಷ 25 ಸಾವಿರ ಉದ್ಯೋಗಿಗಳು ಮಾತ್ರ ಇನ್ಫಿಗೆ












Click it and Unblock the Notifications