ಮಹಾಸ್ಫೋಟವೋ ಅಥವಾ ಮಹಾ ಪ್ರಳಯವೊ!?
ಜಿನೀವಾ, ಸೆ.10: ಬಿಗ್ ಬ್ಯಾಂಗ್ ಪ್ರಯೋಗದ ಬಗ್ಗೆ ವಿಶ್ವದಾದ್ಯಂತ ಉತ್ಕಂಠ ಪರಿಸ್ಥಿತಿ ಉಂಟಾಗಿದೆ. ಈ ಪ್ರಯೋಗದಿಂದ ಪ್ರಪಂಚ ಸರ್ವನಾಶವಾಗಲಿದೆಯೇ? ಬ್ರಹ್ಮಾಂಡ ರಚನೆ ಬಗ್ಗೆ ತಿಳಿಯ ಹೊರಟವ ವಿಜ್ಞಾನಿಗಳು ಭೂಮಿಯನ್ನೇ ಛಿದ್ರ ಮಾಡುವರೇ? ಈ ಎಲ್ಲ ಪ್ರಶ್ನೆಗಳಿಗೆ ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಫ್ರಾನ್ಸ್-ಸ್ವಿಡ್ಜರ್ಲೆಂಡ್ ಗಡಿಯಲ್ಲಿ ನಡೆಯಲಿರುವ ಬಿಗ್ ಬ್ಯಾಂಗ್ ಸ್ಫೋಟ ಪ್ರಯೋಗದಲ್ಲಿ ಉತ್ತರ ಸಿಗಲಿದೆ.
ಯಾಕಾಗಿ ಈ ಪ್ರಯೋಗ?
ಬ್ರಹ್ಮಾಂಡ ಸೃಷ್ಟಿಯಾದ ಬಗೆ ವಿಜ್ಞಾನಿಗಳಿಗೆ ಇಂದಿಗೂ ನಿಗೂಢ. ಈ ಕಾರಣಕ್ಕೆ ಮತ್ತೊಮ್ಮೆ ಮಹಾಸ್ಫೋಟವನ್ನು ಮರುಸೃಷ್ಟಿ ಮಾಡುತ್ತಿದ್ದಾರೆ. ಜಿನಿವಾದಲ್ಲಿರುವ ಯೂರೋಪಿಯನ್ ಆರ್ಗನೈಸೇಶನ್ ಫರ್ ನ್ಯೂಕ್ಲಿಯರ್ ರೀಸರ್ಚ್ ಸಂಸ್ಥೆ(ಸೆರ್ನ್) ಈ ಪ್ರಯೋಗ ನಡೆಸುತ್ತಿದೆ. ಬುಧವಾರ ಅಣುಗಳನ್ನು ಪರಸ್ಪರ ಢಿಕ್ಕ್ಕಿ ಹೊಡೆಸುವ ಪ್ರಕ್ರಿಯೆ ಶುರುವಾಗಲಿದೆ. ಅಂತಿಮ ಸ್ಫೋಟ ಅಕ್ಟೋಬರ್ ನಲ್ಲಿ ನಡೆಯಲಿದೆ. 85 ದೇಶಗಳು ಬಿಗ್ ಬ್ಯಾಂಗ್ ಸ್ಫೋಟಕ್ಕಾಗಿ 3,300 ಕೋಟಿ ರು.ಗಳನ್ನು ಖರ್ಚುಮಾಡಿವೆ.
ಆತಂಕಕ್ಕೆ ಕಾರಣಗಳು
*ಈ ಪ್ರಯೋಗದ ಕಾರಣ ವಿನಾಶ ಸಂಭವಿಸುತ್ತದೆ ಎಂದು ಜನರಲ್ಲಿ ಆತಂಕ ಮನೆಮಾಡಿದೆ.
*ಈ ಪ್ರಯೋಗವನ್ನು ನಿರ್ವಹಿಸುತ್ತಿರುವ ಸೆರ್ನ್ ಸಂಸ್ಥೆಗೆ ಲೆಕ್ಕವಿಲ್ಲದಷ್ಟು ಇ-ಮೇಲ್ ಗಳು, ಬೆದರಿಕೆ ಕರೆಗಳು ಬರುತ್ತಿವೆ.
*ಮಹಾಸ್ಫೋಟ ಸಂಭವಿಸಿದಾಗ ಬ್ಲಾಕ್ ಹೋಲ್ ಗಳು ಸೃಷ್ಟಿಯಾಗುತ್ತವೆ. ಇವು ಭೂಮಿಯನ್ನೇ ನುಂಗುವ ಶಕ್ತಿ ಹೊಂದಿರುತ್ತದೆ. ಅಷ್ಟೇ ಅಲ್ಲದೆ ಭೂಕಂಪ, ಸುನಾಮಿಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
*ಈ ಹುಚ್ಚಾಟವನ್ನ್ನು ವಿಜ್ಞಾನಿಗಳು ನಿಲ್ಲಿಸಬೇಕು ಎಂದು ನ್ಯಾಯಾಲಗಳಿಗೂ ಮೊರೆ ಹೋಗಲಾಗಿದೆ. ಆದರೆ ವಿಜ್ಞಾನಿಗಳು ಮಾತ್ರ ಈ ಪ್ರಯೋಗದಿಂದ ತಲೆಹೊಗುವಂತಹದ್ದೇನು ಸಂಭವಿಸುವುದಿಲ್ಲ ಎಂದು ಅಭಯ ನೀಡಿದ್ದಾರೆ.
ಪ್ರಯೋಗ ಹೇಗೆ?
ನ್ಯೂಟ್ರಾನ್ ಗಳನ್ನು ಬೆಳಕಿನ ವೇಗದಲ್ಲಿ ಪ್ರತಿ ಸೆಕೆಂಡಿಗೆ 3 ಲಕ್ಷ ಕಿ.ಮೀ ವೇಗದಲ್ಲಿ ಚಲಿಸುವಂತೆ ಮಾಡಿ ಪರಸ್ಪರ ಡಿಕ್ಕಿ ಹೊಡೆಸುತ್ತಾರೆ. ಆಗ ಈ ಮಹಾಸ್ಫೋಟ ಉಂಟಾಗುತ್ತದೆ. ಈ ಸ್ಫೋಟದ ಪರಿಣಾಮ ಬಿಗ್ ಬ್ಯಾಂಗ್ ರೀತಿಯಲ್ಲೇ ಇರುತ್ತದೆ. ಲಾರ್ಜ್ ಹಾಡ್ರನ್ ಕೊಲೈಡರ್ ಎಂಬ ಬೃಹತ್ ಉಪಕರಣದಿಂದ ಹೊರಡುವ ಕಣಗಳು ಅಯಸ್ಕಾಂತೀಯ ಕೊಳವೆ ಮಾರ್ಗದಲ್ಲಿ ಸಂಚರಿಸುತ್ತವೆ. ಎರಡು ಮಾರ್ಗಗಳಲ್ಲಿ ಆಗಮಿಸುವ ಈ ಕಣಗಳ ನ್ಯೂಟ್ರಾನ್ ಗಳು ನಿಗದಿತ ಸ್ಥಳದಲ್ಲಿ ಭಾರಿ ವೇಗದಲ್ಲಿ ಡಿಕ್ಕಿ ಹೊಡೆಯುತ್ತವೆ. ಮೊದಲ ಮಾರ್ಗದಲ್ಲಿ ಕಣಗಳನ್ನು ಹರಿಬಿಡುವ ಕಾರ್ಯ ಬುಧವಾರ ಆರಂಭವಾಗುತ್ತದೆ.
ಈ ಪ್ರಯೋಗದ ಮಹಾ ಕೌತುಕವನ್ನು ಆನ್ ಲೈನ್ ನಲ್ಲಿ ವೀಕ್ಷಿಸಬಹುದು.
(ಏಜೆನ್ಸೀಸ್)












Click it and Unblock the Notifications