ಕೇವಲ ಒಂದು ರು.ಗೆ ವೋಲ್ವೊ ಬಸ್ ಪ್ರಯಾಣ!
ಬೆಂಗಳೂರು, ಸೆ. 10 : ಹವಾನಿಯಂತ್ರಿತ ವೊಲ್ವೋ ಹಾಗೂ ಸುವರ್ಣ ಕರ್ನಾಟಕ ಬಸ್ಸಿನ ದರ ಈಗ ಕೇವಲ 1 ರುಪಾಯಿ ಮಾತ್ರ. ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಬಸ್ಸುಗಳನ್ನು ಹೊರತುಪಡಿಸಿ ನಗರದ ಎಲ್ಲಾ ಮಾರ್ಗಗಳಲ್ಲಿ ಸಂಚರಿಸುವ ವೊಲ್ವೋ ಹಾಗೂ ಸುವರ್ಣ ಕರ್ನಾಟಕ ಬಸ್ಸುಗಳ ದರ 1 ರುಪಾಯಿ ನಿಗದಿಪಡಿಸಲಾಗಿದೆ. ಆಶ್ಚರ್ಯವಾದರೂ ಇದು ಸತ್ಯ. ಸಾರಿಗೆ ಸಚಿವ ಸಚಿವ ಆರ್. ಅಶೋಕ್ ಅವರೆ ಸ್ವತಃ ಈ ಘೋಷಣೆ ಮಾಡಿದ್ದಾರೆ.
ವಿಷಯ ಇಷ್ಟೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಬಿಜೆಪಿ ಸರ್ಕಾರ 50ವೋಲ್ವೊ ಹಾಗೂ 50 ಸುವರ್ಣ ಕರ್ನಾಟಕ ಬಸ್ಸುಗಳನ್ನು ನೀಡಿದೆ. ಬುಧವಾರ ವಿಧಾನಸಭೆಯ ಮುಂಭಾಗದಲ್ಲಿ ಸಾರಿಗೆ ಸಚಿವ ಆರ್. ಅಶೋಕ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 100 ನೂತನ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆಶೋಕ್, ಬಿಎಂಟಿಸಿ ಗೆ 100 ನೂತನ ಬಸ್ಸುಗಳನ್ನು ಕೊಡಲಾಗಿದೆ. ಇದರ ಸದುಪಯೋಗ ಎಲ್ಲ ಜನರಿಗೆ ದೊರೆಯಬೇಕು. ಈ ಹಿನ್ನೆಲೆಯಲ್ಲಿ ನೂತನವಾಗಿ ಬಿಡುಗಡೆ ಮಾಡಿರುವ ಬಸ್ಸುಗಳ ದರ ಬುಧವಾರದಿಂದ ಭಾನುವಾರದವರೆಗೆ (ಸೆ.10 ರಿಂದ ಸೆ. 14ರವರೆಗೆ) ನಾಲ್ಕು ದಿನಗಳ ಕಾಲ ಕೇವಲ 1 ರುಪಾಯಿಗೆ ನಿಗದಿಪಡಿಸಲಾಗಿದೆ ಎಂದರು.
ಇದು ತಾತ್ಕಾಲಿಕ ರಿಯಾಯಿತಿಯಾಗಿದ್ದು, ಸೋಮವಾರದಿಂದ ಎಂದಿನಂತೆ ಹಳೆಯ ದರಗಳು ಅನ್ವಯಿಸಲಿವೆ ಎಂದರು. ಆದರೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಈ ರಿಯಾಯಿತಿ ಅನ್ವಯಿಸುವುದಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು. ಶತಕ ಸಂಭ್ರಮದಲ್ಲಿರುವ ಬಿಜೆಪಿ ಸರ್ಕಾರ ಜನಸಾಮಾನ್ಯರಿಗೂ ದುಬಾರಿ ಹವಾನಿಯಂತ್ರಿತ ಬಸ್ಸಿನಲ್ಲಿ ಪ್ರಯಾಣಿಸುವ ಸುಯೋಗವನ್ನು ಕಲ್ಪಿಸಿರುವುದು ಸಂತೋಷದ ಸಂಗತಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಬಸ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬಿಎಂಟಿಸಿ, ಕೆಎಸ್ ಆರ್ ಟಿಸಿಬಸ್ ದರದಲ್ಲಿ ಏರಿಕೆ
ಬಿಎಂಟಿಸಿಯಿಂದ ಆನ್‌ಲೈನಲ್ಲಿ ಟಿಕೆಟ್ ಬುಕಿಂಗ್ ಸೇವೆ












Click it and Unblock the Notifications