ಭೀಕರ ಚಂಡಮಾರುತಕ್ಕೆ ಅಮೆರಿಕ ತಲ್ಲಣ
ನ್ಯೂ ಒರ್ಲಾಂಡ್, ಸೆ. 01 : ಅಮೆರಿಕದ ಕರಾವಳಿಯಲ್ಲಿನ ಸಮುದ್ರ ತೀರ ಪ್ರದೇಶದಲ್ಲಿ ಭೀಕರ ಚಂಡಮಾರುತ ಬೀಸತೊಡಗಿದ್ದು, ದೇಶಾದ್ಯಂತ ತಲ್ಲಣ ಉಂಟು ಮಾಡಿದೆ. ಕರಾವಳಿ ಪ್ರದೇಶದಲ್ಲಿ ನಡೆಸಲಾಗುತ್ತಿರುವ ತೈಲ ಉತ್ಪಾದನೆಯ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸುಮಾರು ಎರಡು ಮಿಲಿಯನ್ ಜನರ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಸುರಕ್ಷಿತಾ ಪ್ರದೇಶಕ್ಕೆ ತೆರಳಲು ಸೂಚನೆ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಭಾನುವಾರ ರಾತ್ರಿ ಕ್ಯೂಬಾ ಸೇರಿದಂತೆ ಅನೇಕ ಕೆರೆಬಿಯನ್ ರಾಷ್ಟ್ರಗಳಿಂದ ಆರಂಭವಾಗಿರುವ ಚಂಡಮಾರುತ ಇಂದು ಅಮೆರಿಕ ಕಡಲ ತೀರದ ಕಡೆಗೆ ಬೀಸತೊಡಗಿದೆ. ಭಾರಿ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂದು ಅಮೆರಿಕ ಹವಾಮಾನ ಇಲಾಖೆ ತಿಳಿಸಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಜನರ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಮೆರಿಕದ ಇತಿಹಾಸದಲ್ಲಿ ಕಂಡರಿಯದ ಚಂಡಮಾರುತ ಇದಾಗಿದೆ ಎನ್ನಲಾಗಿದ್ದು, ಗಾಳಿಯ ಹೊಡೆತಕ್ಕೆ ಸಮುದ್ರ ಉಕ್ಕಿ ಹರಿದು ಅನೇಕ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆಗಳಿವೆ. ಜನತೆ ಜಾಗೃತರಾಗಿರಬೇಕು ಎಂದು ಗವರ್ನರ್ ಬಾಬ್ಬಿ ಜಿಂದಾಲ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications