ಪಾಲಿಟೆಕ್ನಿಕ್‌ಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ
ಬೆಂಗಳೂರು,ಆ.28: ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ತರಗತಿಗೆ ಚಕ್ಕ್ಕರ್ ಹೊಡೆಯುವುದಾಗಲಿ, ಬದಲಿ ಹಾಜರಾತಿ(ಪ್ರಾಕ್ಸಿ) ಹೇಳುವುದಾಗಲಿ ಸಾಧ್ಯವಾಗದ ದಿನಗಳು ಬರಲಿವೆ.
ವಿದ್ಯಾರ್ಥಿಗಳ ಹಾಜರಾತಿಯನ್ನು ಗಣಕೀಕೃತಗೊಳಿಸುವ ವ್ಯವಸ್ಥೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಈ ವರ್ಷದಿಂದಲೇ ಜಾರಿಗೆ ತರುವ ಸಿದ್ಧತೆಯಲ್ಲಿದೆ. ಪಾಲಿಟೆಕ್ನಿಕ್‌ಗಳಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿಗಳು ಪ್ರತಿ ತರಗತಿಗೆ ಹಾಜರಾಗುವ ಮುನ್ನ ' ಬಯೋಮೆಟ್ರಿಕ್ ಅಟೆಂಡೆನ್ಸ್' ಯಂತ್ರದ ಬಳಿ ತಮ್ಮ ಹೆಬ್ಬೆರಳನ್ನು ಒತ್ತಿ ಹಾಜರಾತಿ ಹಾಕಬೇಕಾಗುತ್ತದೆ.
ನಂತರ ತರಗತಿಯಿಂದ ಹೊರಬಂದಾಗ ಮತ್ತೊಮ್ಮೆ ಹೆಬ್ಬೆರಳನ್ನು ಬಯೋಮೆಟ್ರಿಕ್ ಯಂತ್ರದ ಬಳಿ ಒತ್ತಬೇಕು. ಇದರಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾದ ಸಮಯ,ದಿನಾಂಕ ಕರಾರುವಕ್ಕಾಗಿ ದಾಖಲಾಗುತ್ತದೆ. ಒಟ್ಟಿನಲ್ಲಿ ಕಂಪ್ಯೂಟರಿನಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಹಾಜರಾತಿ ವರದಿ ರೂಪದಲ್ಲಿ ಸಿದ್ಧವಾಗಲಿದೆ. ವಿದ್ಯಾರ್ಥಿಗಳು ಯಾವ ತರಗತಿಗೆ ಹಾಜರಾಗಿದ್ದರು ಎಂಬುದು ದಾಖಲೆ ರೂಪದಲ್ಲಿ ದೊರೆಯಲಿದೆ.
ಪಾಲಿಟೆಕ್ನಿಕ್‌ಗಳಲ್ಲಿ ವಿದ್ಯಾರ್ಥಿಗಳ ಗೈರುಹಾಜರಿ ಸಮಸ್ಯೆ ತೀವ್ರವಾಗುತ್ತಿರುವ ಕಾರಣ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು. ಮುಂದೆ ಈ ವ್ಯವಸ್ಥೆಯನ್ನು ಪಾಲಿಟೆಕ್ನಿಕ್ ಸಿಬ್ಬಂದಿ, ಉಪನ್ಯಾಸಕರಿಗೂ ವಿಸ್ತರಿಸುವ ಯೋಚನೆ ಶಿಕ್ಷಣ ಇಲಾಖೆಯದು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications