ಮುಂಬಯಿಯಲ್ಲಿ ಕಟ್ಟಡ ಕುಸಿತ: 6 ಜನ ಸಾವು
ಮುಂಬಯಿ, ಆ. 13: ಇಲ್ಲಿನ ಭಿಂಡಿ ಬಜಾರ್ ನಲ್ಲಿ ಮೂರಂತಸ್ತಿನ ಕಟ್ಟಡ ಉರುಳಿದ ಪರಿಣಾಮ 6 ಜನ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ನಡೆದ ಈ ದುರ್ಘಟನೆಯಲ್ಲಿ ಸುಮಾರು 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೃತಗೊಂಡವರಲ್ಲಿ ತಲಾ ಇಬ್ಬರು ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದ್ದಾರೆ. ಕಟ್ಟಡದ ಅವಶೇಷದಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಿಕ್ಕಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಗಾಯಗೊಂಡವರನ್ನು ಸಮೀಪದ ಜೆಜೆ ಆಸ್ಪತ್ರೆಗೆ ಸೇರಿಸಲಾಗಿದೆ.ಸ್ಥಳೀಯರು ಹಾಗೂ ಅಗ್ನಿಶಾಮಕದಳದವರ ನೆರವಿನಿಂದ ಕಟ್ಟಡದ ಅವಶೇಷಗಳನ್ನು ತೆಗೆಯಲಾಗುತ್ತಿದೆ.
2007 ರಲ್ಲೇ ಭಿಂಡಿ ಬಜಾರ್ ಬಳಿಯ ಈ ಕಟ್ಟಡ ಸೇರಿದಂತೆ ಸುಮಾರು 500 ವಸತಿ ಕಟ್ಟಡಗಳಿಗೆ ಕೂಡಲೇ ತೆರವುಗೊಳಿಸುವಂತೆ ಆದೇಶ ನೀಡಲಾಗಿತ್ತು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಕುಸಿದಿದೆ ಎಂದು ಸ್ಥಳೀಯ ನಗರಪಾಲಿಕೆ ಹೇಳಿದೆ.
(ದಟ್ಸ್ ಕನ್ನಡವಾರ್ತೆ)











Click it and Unblock the Notifications