ಹೈಬ್ರಿಡ್‌ಗೆ ಸಡ್ಡು ಹೊಡೆಯುತ್ತಿರುವ ನಾಟಿ ತರಕಾರಿ
ಬೆಂಗಳೂರು, ಆ.5: ನೇರಳೆ ಬಣ್ಣದ ದೊಣ್ಣೆ ಮೆಣಸಿನಕಾಯಿ, ಕಪ್ಪು, ಹಸಿರು, ಹಳದಿ ಬಣ್ಣದ ಹೈಬ್ರಿಡ್ ಟೊಮ್ಯಾಟೋಗಳು ಮಾರುಕಟ್ಟೆಯಲ್ಲಿ ಕಾಣಸಿಗುವುದು ಅಪರೂಪವೇನಲ್ಲ. ಆದರೆ ನಾಟಿ ಪದ್ಧತಿಯಲ್ಲಿ ಬೆಳೆದ ಬಣ್ಣಬಣ್ಣದ ಜೈವಿಕ ತರಕಾರಿಗಳನ್ನು ನೋಡಿದ್ದೀರಾ? ತೋಟಗಾರಿಕೆ ಇಲಾಖೆಯ ಅವಿರತ ಕೃಷಿ ಫಲಿತವಾಗಿ ಇನ್ನು ಮುಂದೆ ಬಣ್ಣಬಣ್ಣದ ನಾಟಿ ತರಕಾರಿಗಳು ಮಾರುಕಟ್ಟೆ ಯಲ್ಲಿ ಕಣ್ಣು ಕುಕ್ಕಲಿವೆ.
ಯಾವುದೇ ರಾಸಾಯನಿಕಗಳನ್ನು ಬಳಸದೆ ಸಂಪೂರ್ಣ ಜೈವಿಕವಾಗಿ ಬೆಳೆದ ಈ ತರಕಾರಿಗಳು ರುಚಿ ಮತ್ತು ಪೌಷ್ಠಿಕತೆಯಲ್ಲಿ ಹೈಬ್ರಿಡ್ ತರಕಾರಿಗಳಿಗಿಂತಲೂ ಒಂದು ಪಟ್ಟು ಹೆಚ್ಚಾಗೇ ಇರುತ್ತವೆ. ಪ್ರಕೃತಿ ಯೇ ಸೃಷ್ಟಿಸಿದ ಈ ಚಿತ್ರವಿಚಿತ್ರ ಬಣ್ಣದ ತರಕಾರಿ ಬೀಜಗಳನ್ನು ಸಂಗ್ರಹಿಸಿ ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ಉತ್ಪಾದಿಸಲು ತೋಟಗಾರಿಕೆ ಇಲಾಖೆ ಟೊಂಕ ಕಟ್ಟಿ ನಿಂತಿದೆ.
ಇಷ್ಟು ದಿನ ಮಿಶ್ರತಳಿ ಹಾಗೂ ತಳಿ ಪರಿವರ್ತನೆ ಮಾಡಿದ ತರಕಾರಿ ಬೀಜಗಳ ಏಕಸ್ವಾಮ್ಯ ಕೃಷಿ ವಲಯ ಕಪಿಮುಷ್ಟಿಯಲ್ಲಿತ್ತು. ಈಗ ತೋಟಗಾರಿಕೆ ಇಲಾಖೆ ಪ್ರಕೃತಿ ಸಹಜವಾಗಿ ಹಾಗೂ ಸಾಂಪ್ರಾದಾಯಿಕವಾಗಿ ಲಭಿಸುವ ವಿವಿಧ ತಳಿಯ ತರಕಾರಿ ಬೀಜಗಳನ್ನು ಉತ್ಪಾದಿಸಿ ಇವುಗಳನ್ನು ಜೈವಿಕ ಪದ್ಧತಿಯಲ್ಲಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಿರುವುದಾಗಿ ತೋಟಗಾರಿಕೆ ಇಲಾಖೆ ಹುಳಿಮಾವು ಜೈವಿಕ ಕೇಂದ್ರದ ಉಪ ನಿರ್ದೇಶಕ ಎಂ.ವಿಶ್ವನಾಥ್ ತಿಳಿಸಿದರು. ಇದರಿಂದ ರೈತರು ತಮಗೆ ಅಗತ್ಯವಿರುವಷ್ಟು ಬೀಜಗಳನ್ನು ತಾವೇ ಹುಟ್ಟುವಳಿ ಮಾಡಿಕೊಂಡು ಬೀಜ ಉತ್ಪಾದನೆ ಕಂಪನಿಗಳ ಮೇಲಿನ ಅವಲಂಭನೆಯನ್ನು ತಪ್ಪಿಸಬಹುದು ಎಂದರು.
ಸಾಂಪ್ರಾದಾಯಿಕವಾಗಿ ಲಭಿಸುವ ದೊಡ್ಡ ಮೆಣಸಿನಕಾಯಿ, ಟೊಮ್ಯಾಟೋ, ಕುಂಬಳಕಾಯಿ, ಸೌತೆಕಾಯಿ, ಹಾಗಲ ಕಾಯಿ, ಸೋರೆಕಾಯಿ, ಹೀರೇಕಾಯಿ ಬೀಜಗಳನ್ನು ಇಲಾಖೆ ಸಂಗ್ರಹಿಸಿ ಇವುಗಳ ಬೇಸಾಯಕ್ಕೆ ಪ್ರೊತ್ಸಾಹಿಸಲಿದೆ. ಇಲಾಖೆ ಬಳಿ ಈಗಾಗಲೇ 20 ಬಗೆಯ ಟೊಮ್ಯಾಟೋ ಹಾಗೂ ದೊಡ್ಡ ಮೆಣಸಿನಕಾಯಿ ತಳಿಗಳು ಲಭ್ಯವಿದೆ. ಬೀಜ ಉತ್ಪಾದನೆಗೆ ಪಾಂಡಿಚೇರಿಯ ಆರೋವಿಲ್ಲೆ ಪ್ರತಿಷ್ಠಾನದ ಮಾದರಿ ತಂತ್ರಜ್ಞಾನವನ್ನು ತೋಟಗಾರಿಕೆ ಇಲಾಖೆ ಅಳವಡಿಸಿಕೊಂಡಿದೆ. ಕೊಳ್ಳೆಗಾಲದ ರೈತರಿಗೆ ಈ ರೀತಿ ಉತ್ಪಾದಿಸಿದ ಬೀಜಗಳನ್ನು ಉಚಿತವಾಗಿ ಹಂಚಲಾಗಿದೆ. ಅಲ್ಲಿನ ರೈತರು ಈ ಬೇಸಾಯದಲ್ಲಿ ಯಶಸ್ಸನ್ನೂ ಕಂಡಿದ್ದಾರೆ ಎಂದರು. ನಾಟಿ ತರಕಾರಿ ಬೆಳೆ ಸ್ಥಳೀಯ ಹವಾಗುಣಕ್ಕೆ ಒಗ್ಗಿಕೊಳ್ಳುತ್ತದೆ ಜೊತೆಗೆ ಈ ಬೆಳೆಗೆಕ್ರಿಮಿನಾಶಕಗಳ ಸಿಂಪರಣೆ ಅಗತ್ಯವಿಲ್ಲ ಇವು ಸಂಪೂರ್ಣ ಆರೋಗ್ಯದಾಯಕ ಎಂದು ತಿಳಿಸಿದರು.
ಸಾಂಪ್ರಾದಾಯಿಕ ನಾಟಿ ತರಕಾರಿಗಳ ಬೇಸಾಯ ಕಡಿಮೆಯಾಗುತ್ತಿರುವಕಾರಣ ಬೇಡಿಕೆ ಅಧಿಕವಾಗಿದೆ. ಹೈಬ್ರಿಡ್ ತಳಿಗಳಿಗಿಂತಲೂ ನಾಟಿ ತಳಿಗಳ ಇಳುವರಿ ಶೇ.10ರಷ್ಟು ಕಡಿಮೆ ಇರಬಹುದು ಆದರೆ ಹೈಬ್ರಿಡ್ ಬೆಳೆಗೆ ತಗಲುವ ಖರ್ಚು ಅಧಿಕವಾಗಿರುತ್ತದೆ ಎಂದು ಅವರು ವಿವರಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications