ಲೋಧಾ ಗ್ರುಪ್‌ನೊಂದಿಗೆ ವಿಪ್ರೊ ಬಹುಕೋಟಿ ಒಪ್ಪಂದ
ಬೆಂಗಳೂರು, ಜು. 24 : ದೇಶದ ಪ್ರತಿಷ್ಠಿತ ಸಾಫ್ಟವೇರ್ ಸಂಸ್ಥೆ ವಿಪ್ರೋ ಇನ್ಪೋಟೆಕ್ ಲಿಮಿಟೆಡ್ ಜತೆಗೆ ಮುಂಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮದ ಪ್ರಮುಖ ಸಂಸ್ಥೆ ಲೋಧಾ ಗ್ರುಪ್ ಸಾಫ್ಟವೇರ್ ಉತ್ಪನ್ನಗಳ ವ್ಯಾಪಾರ ವಹಿವಾಟಿನ ದೀರ್ಘ ಕಾಲದ ಒಪ್ಪಂದವನ್ನು ಮಾಡಿಕೊಂಡಿವೆ. ಗುರುವಾರ ನಗರದಲ್ಲಿ ಹೋಟೆಲ್ ಒಂದರಲ್ಲಿ ನಡೆದ ಸಭೆಯಲ್ಲಿ ಉಭಯ ಸಂಸ್ಥೆಯ ಮುಖ್ಯಸ್ಥರು ಸುಮಾರು 10 ವರ್ಷಗಳ ಕಾಲದ ಬಹುಕೋಟಿ ರು.ಗಳ ಒಪ್ಪಂದಕ್ಕೆ ಅಧಿಕೃತ ಮುದ್ರೆ ಹಾಕಿದರು.
ಲೋಧಾ ಗ್ರುಪ್ ಮೂಲತಃ ಅಂತರಾಷ್ಟ್ರೀಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದು ಆ ಕ್ಷೇತ್ರದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಸುಮಾರು 6 ಸಾವಿರ ಕೋಟಿ ರು.ಗಳಿಗಿಂತ ಅಧಿಕ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿರುವ ಲೋಧಾ ಗ್ರುಪ್ ಇತ್ತೀಚಿನ ದಿನಗಳಲ್ಲಿ ತನ್ನ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಸಾಪ್ಟ್‌ವೇರ್ ಉತ್ಪನ್ನ ತಯಾರಿಕೆ ಮತ್ತು ಮಾರಾಟಕ್ಕೂ ಮುಂದಾಗಿದೆ.
ಈ ವಿಷಯವನ್ನು ಪ್ರಕಟಿಸಿರುವ ಲೋಧಾ ಸಂಸ್ಥೆಯ ನಿರ್ದೇಶಕ ಅಭಿಷೇಕ್ ಲೋಧಾ ಮಾತನಾಡುತ್ತಾ, ಜಾಗತಿಕ ಮಟ್ಟದ ಸಾಪ್ಟ್‌ವೇರ್ ಉದ್ಯಮದಲ್ಲಿ ವಿಪ್ರೋ ತನ್ನದೇ ಸ್ಥಾನವನ್ನು ಗಳಿಸಿದೆ. ಇಂತಹ ಕಂಪನಿಯೊಂದಿಗೆ ವ್ಯವಹಾರ ನಡೆಸುವುದು ಸಂತೋಷದ ಸಂಗತಿ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಒಪ್ಪಂದದಿಂದ ವ್ಯಾಪಾರ ವೃದ್ಧಿಯ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ . ವಿಪ್ರೋ ಸಂಸ್ಥೆಯೊಂದಿಗೆ 10 ವರ್ಷಗಳ ಕಾಲದ ವ್ಯವಹಾರಕ್ಕೆ ಒಪ್ಪಂದವಾಗಿದ್ದು, ವರ್ಷಕ್ಕೆ 132 ಕೋಟಿ ರು. ಗಳ ವಹಿವಾಟು ನಡೆಸುವ ಬಗ್ಗೆ ಅಂದಾಜಿಸಲಾಗಿದೆ. ಈ ಒಪ್ಪಂದದಿಂದ ಸಂಸ್ಥೆಯ ಬೆಳವಣಿಗೆ ಸಾಧ್ಯವಿದೆ ಎಂದು ವಿಪ್ರೋ ಸಂಸ್ಥೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications