ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಕೊಟ್ಟ ಸಂಸದರು; ಇಕ್ಕಟ್ಟಿನಲ್ಲಿ ಮುಲಾಯಂ

By Staff
|
Google Oneindia Kannada News

ನವದೆಹಲಿ, ಜು.18 : ಯುಪಿಎ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಸಮಾಜವಾದಿ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವಲ್ಲಿ ಪಕ್ಷದ ಮುಖಂಡರು ಮುಂದಾಗಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂಸಿಂಗ್ ಯಾದವ್ ಮತ್ತು ಅಮರಸಿಂಗ್ ಅವರನ್ನು ಒಳಗೊಂಡು ಹಿರಿಯ ಮುಖಂಡರು ಪಕ್ಷದ ವಿರುದ್ಧ ಅಸಮಧಾನ ವ್ಯಕ್ತಪಡಿಸಿರುವವರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶುಕ್ರವಾರ ಪಕ್ಷದ ಉನ್ನತ ಮಟ್ಟದ ಸಭೆ ಆರಂಭವಾಗಿದ್ದು, ವಿಶ್ವಾಸಮತ ಕುರಿತು ಗಹನವಾದ ಚರ್ಚೆ ನಡೆಸಿದ್ದಾರೆ. ಜು. 22 ರಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಎಸ್‌ಪಿ ಭರವಸೆ ನೀಡಿದೆ. ಈಗಾಗಲೇ ವಿಶ್ವಾಸಮತ ದಿನದ ಕ್ಷಣಗಣನೆ ಆರಂಭವಾಗಿದೆ. ವಿರೋಧ ಪಕ್ಷಗಳಾದ ಎನ್ ಡಿಎ ಮತ್ತು ಎಡಪಕ್ಷಗಳು ಶತಾಯಗತಾಯ ವಿಶ್ವಾಸಮತದಲ್ಲಿ ಸೋಲಿಸಿ ಸರ್ಕಾರವನ್ನು ಮುಖಭಂಗಕ್ಕೆ ಈಡುಮಾಡಬೇಕೆಂದು ಗುಪ್ತ ಕಾರ್ಯಚರಣೆ ನಡೆಸಿವೆ. ಚಿಕ್ಕಪುಟ್ಟ ಪಕ್ಷಗಳ ಕೈಯಲ್ಲಿ ಯುಪಿಎ ಸರ್ಕಾರದ ಕೀಲಿ ಕೈಯಿದ್ದು, ಅವರನ್ನು ಯುಪಿಎ ಕಡೆಗೆ ತೆರಳದಂತೆ ನೋಡಿಕೊಳ್ಳುವ ಕೆಲಸವೂ ಭರದಿಂದ ನಡೆದಿದೆ.

ಈ ಎಲ್ಲದರ ಬೆನ್ನ ಹಿಂದೆಯೇ ಯುಪಿಎ ಸರ್ಕಾರಕ್ಕೆ ಬೆಂಬಲ ಘೋಷಿಸಿರುವ ಸಮಾಜವಾದಿ ಪಕ್ಷದಲ್ಲಿ ಆಂತರಿತ ಭಿನ್ನಮತ ಸ್ಫೋಟಗೊಂಡಿದೆ. 39 ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷದಲ್ಲಿ 16 ಜನ ವಿವಿಧ ಕಾರಣಗಳಿಂದ ವಿಶ್ವಾಮತಕ್ಕೆ ಗೈರು ಹಾಜರಾಗಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಮುಖ್ಯವಾಗಿ ಇಬ್ಬರು ಸಂಸದರು ಜೈಲಿನಲ್ಲಿ ಇದ್ದಾರೆ. ಕೆಲವರು ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದಾರೆ. ಇನ್ನು ಕೆಲವರು ಬಹಿರಂಗವಾಗಿ ಯಪಿಎ ಬೆಂಬಲ ಸೂಚಿಸಿರುವುದನ್ನು ಬಲವಾಗಿ ವಿರೋಧಿಸಿದ್ದಾರೆ. ಹೀಗೆ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಸಮಾಜವಾದಿ ಪಕ್ಷದ ಎಲ್ಲ 39 ಸಂಸದರು ಯುಪಿಎ ಪರವಾಗಿ ಮತ ಹಾಕಲಿದ್ದಾರೆಯೇ ಎನ್ನುವ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಶ್ವಾಸಮತ ಗೊತ್ತುವಳಿ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡರು ತಮ್ಮ ಸಂಸದರಿಗೆ ವಿಫ್ ಜಾರಿ ಮಾಡುವುದು ಖಚಿತ. ವಿಫ್ ಜಾರಿ ಮಾಡಿದಾಗಲೂ ಗೈರು ಹಾಜರಾದರೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಆದರೆ ಯುಪಿಎ ನೀಡಿರುವ ಮಾತು ಉಳಿಸಿಕೊಳ್ಳುವುದು ಸಮಾಜವಾದಿ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮಾತು ಉಳಿಸಿಕೊಳ್ಳಲು ಮುಖಂಡರು ಅಸಮಾಧಾನಗೊಂಡಿರುವ ಸಂಸದರ ಮನವೊಲಿಸಲು ನಿರತರಾಗಿದ್ದಾರೆ. ಒಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಇದು ಯುಪಿಎ ಸರ್ಕಾರದ ಭವಿಷ್ಯದ ಪ್ರಶ್ನೆಯಾಗಿದೆ. ವಿಶ್ವಾಸಮತದಲ್ಲಿ ಸೋಲುಂಟಾಗಿ ಯುಪಿಪಿ ಸರ್ಕಾರ ಪತನವಾದಲ್ಲಿ ಅಣು ಒಪ್ಪಂದಕ್ಕೆ ಹಿನ್ನಡೆಯಾಗುವದಂತೂ ಖಚಿತ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X