ವಿಮಾನ ನಿಲ್ದಾಣದಲ್ಲಿ ಅಕ್ರಮ ಹೆರಾಯಿನ್ ವಶ
ಬೆಂಗಳೂರು, ಜು.4: ಅಕ್ರಮ ಹೆರಾಯಿನ್ ಸಾಗಿಸುತ್ತಿದ್ದ ಇಬ್ಬರು ವಿದೇಶಿಯರನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂಧಿಸಿದ್ದಾರೆ.
ತಾಂಜಾನಿಯಾದ ಮಿಷೇ ಶಬಾನಿ ಸೆಲೆಮನಿ (36) ಮತ್ತು ಥಾಯ್ಲೆಂಡಿನ ಕೇಕ್‌ಟೆಟ್ ಟಿಟಾರೆ (23) ಬಂಧಿತ ಆರೋಪಿಗಳಿಂದ ಸುಮಾರು 10 ಕೋಟಿ ರು. ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಪ್ರವೇಶ ದ್ವಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೇಕ್ ಟೆಟ್ ಟಿಟಾರೆ ಬ್ಯಾಗ್ ತಪಾಸಣೆ ಮಾಡುತ್ತಿರಬೇಕಾದರೆ ಸುಮಾರು ಎರಡು ಕೆ.ಜಿ.ಹೆರಾಯಿನ್ ಪತ್ತೆಯಾಗಿದೆ. ನವದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಈಕೆ ಕ್ವಾಲಾಲಂಪುರಕ್ಕೆ ಹೊರಡುತ್ತಿದ್ದಳು.
ಮತ್ತೊಬ್ಬ ಬಂಧಿತ ಆರೋಪಿ ಶಬಾನಿ ಸೆಲೆಮನಿ ಹೆರಾಯಿನ್ ಅನ್ನು ಕ್ಯಾಪ್ಸುಲ್‌ಗಳಲ್ಲಿ ತುಂಬಿಸಿಕೊಂಡು ನೇರವಾಗಿ ಹೊಟ್ಟೆಗೆ ಇಳಿಸಿದ್ದ. ಆತನ ದೇಹದಲ್ಲಿ ಒಟ್ಟು 65 ಕ್ಯಾಪ್ಸುಲ್‌ಗಳು ಪತ್ತೆಯಾಗಿವೆ. ತಲಾ 13 ಗ್ರಾಂ ತೂಕದ ಕ್ಯಾಪ್ಸುಲ್‌ಗಳಲ್ಲಿ ಒಟ್ಟು 856 ಗ್ರಾಂ ಹೆರಾಯಿನ್ ತುಂಬಲಾಗಿತ್ತು. ಈ ಇಬ್ಬರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಹೆರಾಯಿನ್ ಮಾರುಕಟ್ಟೆ ಮೌಲ್ಯ 10 ಕೊಟಿ ರು.ಗಳು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications