ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ವ್ಯವಸ್ಥೆ
ಬೆಂಗಳೂರು ಉದ್ಯಾನ ನಗರಿ ಎಂಬ ಬಿರುದು ಕಳೆದುಕೊಂಡು ಮೇಲ್ಸೇತುವೆಗಳ ನಗರಿ, ಟ್ರಾಫಿಕ್ ಜಾಮ್‌ಗಳ ನಗರಿ, ಅಧ್ವಾನಗಳ ನಗರಿ, ಮಾಲಿನ್ಯ ನಗರಿ ಎಂಬ ಬಿರುದುಗಳನ್ನು ಹೊತ್ತರೆ ಆಶ್ಚರ್ಯವೇನೂ ಅಲ್ಲ. ಆಡಳಿತ ಸರ್ಕಾರ ಮತ್ತು ಪೊಲೀಸ್ ಇಲಾಖೆಗಳೆರಡಕ್ಕೂ ವಾಹನ ಸಂಚಾರ ದುರ್ವ್ಯವಸ್ಥೆಯಿಂದಾಗಿ ಉಸಿರುಗಟ್ಟಿದಂತಾಗಿದೆ. ಒಂದೆಡೆ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಸಂಕಲ್ಪ, ದೂರಾಲೋಚನೆಯ ಕೊರತೆ. ಬೆಂಗಳೂರಿನ ಎಲ್ಲ ಪ್ರದೇಶಗಳಲ್ಲಿ ಟ್ರಾಫಿಕ್ಕನ್ನು ಹದ್ದುಬಸ್ತಿನಲ್ಲಿ ತರಲು ಮೇಲ್ಸೇತುವೆಗಳ ಮೇಲೆ ಮೇಲ್ಸೇತುವೆ, ಮೆಟ್ರೋ ನಿರ್ಮಿಸುತ್ತಿದ್ದರೂ ಮಿತಿಮೀರಿದ ವಾಹನಗಳ ಸಂಚಾರದಿಂದಾಗಿ ಟ್ರಾಫಿಕ್ ನೊಗ ಕಿತ್ತ ಹೋರಿಯಂತಾಗಿದೆ.
ಎಲ್ಲಿ ನೋಡಿದರಲ್ಲಿ ಏಕಾಂಗಿಯನ್ನು ಹೊತ್ತಿರುವ ಕಾರು, ರಿಕ್ಷಾಗಳು, ರಸ್ತೆ ಫುಟ್ಪಾತು ಒಂದು ಮಾಡಿರುವ ದ್ವಿಚಕ್ರವಾಹನಗಳು, ಎಮಿಷನ್ ಟೆಸ್ಟ್ ಮಾಡಿಸಿಕೊಂಡಿರದ ಬಿಎಂಟಿಸಿ ಬಸ್ಸುಗಳು... ಹಗಲಿರುಳೆನ್ನದೆ ಬೆಂಗಳೂರಿನ ಮೇಲೆ ವಾಯುಮಾಲಿನ್ಯದ ಚಪ್ಪರ. ಮನೆಸೇರಿ ಕರ್ಚೀಫಿಂದ ಕಣ್ಣು ಒರೆಸಿಕೊಂಡರೆ ಪಿಚ್ಚಿನ ಜೊತೆ ಮಾಲಿನ್ಯದ ಮಸಿ, ಕಣ್ಣು ಉರಿಉರಿ!
ವಾಹನಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಟ್ರಾನ್ಸ್‌ಪೋರ್ಟ್ ಇನ್‌ಫಾರ್ಮೇಷನ್ ಸಿಸ್ಟಂ(BTIS) ಟ್ರಾಫಿಕ್ ಅವ್ಯವಸ್ಥೆಯ ಆಗರವಾಗಿರುವ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು ಸಂಚಾರ ಪೊಲೀಸ್‌ಗೆ ನೆರವಾಗುತ್ತಿದೆ. ಯಾವ್ಯಾವ ಪ್ರದೇಶದಲ್ಲಿ ಯಾವ್ಯಾವ ಸಮಯದಲ್ಲಿ ಟ್ರಾಫಿಕ್ ಹೇಗಿದೆ ಎಂದು ತಿಳಿಯುವ ಕೆಲಸವನ್ನು ಈ ಕ್ಯಾಮೆರಾಗಳು ಸುಲಭವಾಗಿಸಿವೆ. ಖಾಸಗಿ ವಾಹನ ಚಾಲಕರು ಕೂಡ ಈ ವ್ಯವಸ್ಥೆಯ ಲಾಭವನ್ನು ಪಡೆಯಬಹುದು.
ಸರ್ಕಾರ, ಪೊಲೀಸ ಇಲಾಖೆ, ಬಿಟಿಐಎಸ್‌ನಂಥ ಸಂಸ್ಥೆಗಳು ಸಂಚಾರ ನಿಯಂತ್ರಣಕ್ಕೆ ತರಲು ಎಷ್ಟೇ ಹೆಣಗಾಡಿದರೂ ಸಾರ್ವಜನಿಕರ ಭಾಗವಹಿಸುವಿಕೆ, ಸಹಕಾರವಿಲ್ಲದೇ ನಿಯಂತ್ರಣ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರೂ ಕೈಜೋಡಿಸಬೇಕೆಂಬುದು ಬಿಟಿಐಎಸ್ ಅಭಿಪ್ರಾಯ. ಟ್ರಾಫಿಕ್ ನಿಯಂತ್ರಣಕ್ಕೆ ಸಾರ್ವಜನಿಕರು ಈ ಸಂಸ್ಥೆಗೆ ಸಲಹೆ ಸೂಚನೆಗಳನ್ನೂ ನೀಡಬಹುದು.(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications