ಪೆಟ್ರೋಲ್ ಮಾರಾಟ ತೆರಿಗೆ ಕಡಿಮೆ ಮಾಡಲು ನಿರ್ಧಾರ
ಬೆಂಗಳೂರು, ಜೂ.17: ಗ್ರಾಹಕರ ಮೇಲಿನ ಹೆಚ್ಚಿನ ಹೊರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಜೂ.19ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವುದಾಗಿ ಗೃಹ ಸಚಿವ ವಿ.ಎಸ್.ಆಚಾರ್ಯ ಮಂಗಳವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿದ್ದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರು.ಗಳಷ್ಟು ಹೆಚ್ಚಿನ ಹೊರೆಯಾಗಿದೆ. ಆದರೆ 380 ಕೋಟಿ ರು.ಗಳಷ್ಟು ಮಾತ್ರ ಹೆಚ್ಚಿನ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತಿದೆ. ವಿಮಾನ ಇಂಧನದ ಮೇಲಿನ ತೆರಿಗೆ ಇತರ ರಾಜ್ಯಗಳಲ್ಲಿ ಶೇ.20ರಷ್ಟಿದ್ದರೆ ಕರ್ನಾಟಕದಲ್ಲಿ ಶೇ.28ರಷ್ಟಿದೆ. ಹಾಗೆಯೇ ಪೆಟ್ರೋಲ್ ಬೆಲೆ ಕರ್ನಾಟಕದಲ್ಲಿ ಲೀಟರ್‌ಗೆ 42.75 ರು.ಗಳಿದ್ದರೆ ಉಳಿದ ರಾಜ್ಯಗಳಲ್ಲಿ 40 ರು.ಗಳಷ್ಟಿದೆ.
ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈಗ ವಿಧಿಸಿರುವ ಮಾರಾಟ ತೆರಿಗೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಕಡಿಮೆ ಮಾಡುವುದಾಗಿ ಅವರು ಭರವಸೆ ನೀಡಿದರು. ಮಾರಾಟ ತೆರಿಗೆಯನ್ನು ಎಷ್ಟು ಕಡಿಮೆ ಮಾಡಲಾಗುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಹಾಗೆಯೇ ಅಡುಗೆ ಅನಿಲ(ಎಲ್‌ಪಿಜಿ)ಬೆಲೆ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಅವರು ತಿಳಿಸಿದರು.
(ಯುಎನ್‌ಐ)












Click it and Unblock the Notifications