ದೆಹಲಿ, ಮುಂಬೈಗಿಂತಲೂ ಬೆಂಗಳೂರು ಉತ್ತಮ: ಸಮೀಕ್ಷೆ
ಬೆಂಗಳೂರು, ಜೂ.10: ಸಮಸ್ಯೆಗಳ ಜಂಜಾಟದಿಂದ ಸದಾ ಬಳಲುತ್ತಿರುವ ಬೆಂಗಳೂರಿಗರಿಗೊಂದು ಸಂತಸದ ಸುದ್ದಿ. ದೇಶದ ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಉತ್ತಮ ಗುಣಮಟ್ಟದ ಜೀವನ ನಡೆಸಬಹುದು ಎಂದು ಮರ್ಸರ್ ಎಂಬ ಸಂಸ್ಥೆ ನಿರ್ವಹಿಸಿದ ಜಾಗತಿಕ ಸಮೀಕ್ಷೆ ತಿಳಿಸಿದೆ.
ಈ ಜಾಗತಿಕ ಸಮೀಕ್ಷೆಯ ಪ್ರಕಾರ ಬೆಂಗಳೂರಿನ ನಂತರದ ಸ್ಥಾನದಲ್ಲಿ ಮುಂಬೈ ಮತ್ತು ನವದೆಹಲಿಗಳು ಪಡೆದುಕೊಂಡಿವೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು 140ನೇ ಸ್ಥಾನದಲ್ಲಿದ್ದರೆ, ಮುಂಬೈ, ನವದೆಹಲಿ ಮತ್ತು ಚೆನ್ನೈ ನಗರಗಳು ಕ್ರಮವಾಗಿ 142, 145, 153ನೇ ಸ್ಥಾನದಲ್ಲಿವೆ. ಕಳೆದ ವರ್ಷದ ಸಮೀಕ್ಷೆಯಲ್ಲಿ ಬೆಂಗಳೂರು 153ನೇ ಸ್ಥಾನದಲ್ಲಿದ್ದರೆ ಮುಂಬೈ, ನವದೆಹಲಿ ಮತ್ತು ಚೆನ್ನೈ ನಗರಗಳು ಕ್ರಮವಾಗಿ 151, 148 ಮತ್ತು 159ನೇ ಸ್ಥಾನದಲ್ಲಿದ್ದವು.
ವೈಯಕ್ತಿಯ ಭದ್ರತೆ ವಿಚಾರದಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಚೆನ್ನೈ ಹಾಗೂ ಬೆಂಗಳೂರು ನಗರಗಳು ವೈಯಕ್ತಿಕ ಭದ್ರತೆಯಲ್ಲಿ 112ನೇ ಸ್ಥಾನದಲ್ಲಿವೆ. ವೈಯಕ್ತಿಕ ಭದ್ರತೆಯಲ್ಲಿ ನವದೆಹಲಿ ಮತ್ತು ಮುಂಬೈ ನಗರಗಳು ಕ್ರಮವಾಗಿ 121 ಹಾಗೂ 142ನೇ ಸ್ಥಾನಗಳನ್ನು ಪಡೆದುಕೊಂಡಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಮೀಕ್ಷೆ ನಡೆಸಿದ ಮರ್ಸರ್ ಸಂಸ್ಥೆ ತಿಳಿಸಿದೆ.
ರಾಜಕೀಯ ಮತ್ತು ಸಾಮಾಜಿಕ ಪರಿಸರ, ವೈದ್ಯಕೀಯ ಮತ್ತು ಆರೋಗ್ಯ, ಆರ್ಥಿಕ ಮತ್ತು ಲಭ್ಯವಿರುವ ಗ್ರಾಹಕ ಉತ್ಪನ್ನಗಳು, ಸಾರ್ವಜನಿಕ ಸೇವೆ ಮತ್ತು ಸಾರಿಗೆ, ಮನರಂಜನೆ ಮತ್ತು ಗುಣಮಟ್ಟದಿಂದ ಕೂಡಿದ ವಸತಿ ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಮೀಕ್ಷೆಯನ್ನು ನಿರ್ವಹಿಸಲಾಗಿದೆ.
ವೈಯಕ್ತಿಕ ಸುರಕ್ಷತೆಯನ್ನು ಆಂತರಿಕ ಭದ್ರತೆ, ಅಪರಾಧ, ಕಾನೂನು ಸುವ್ಯವಸ್ಥೆ ಮತ್ತು ಇತರ ನಗರ ಹಾಗೂ ದೇಶಗಳೊಂದಿಗೆ ಸಂಪರ್ಕ ಈ ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮೀಕ್ಷೆಯನ್ನು ನಿರ್ವಹಿಸಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications