ಕಾಫಿ ಕಂಪನಿ ಸ್ಟಾರ್‌ಬಕ್ಸ್‌ನಿಂದ ಕನ್ನಡದ ಅವಗಣನೆ
ನವದೆಹಲಿ, ಮೇ 16 : ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದರು ಎಂಬಂತೆ ಕಾಫಿ ಮಾರುಕಟ್ಟೆಯ ಜಾಗತಿಕ ಹಿರಿಯಣ್ಣನಂತಿರುವ ಅಮೆರಿಕಾದ ಸ್ಟಾರ್‌ಬಕ್ಸ್ ಕಂಪನಿ ಭಾರತಕ್ಕೆ ಕಾಲಿಡುವ ಮೊದಲೇ ತಮಿಳು, ತೆಲುಗು, ಪಂಜಾಬಿ, ಬಾಂಗ್ಲಾ, ಗುಜರಾತಿ ಮತ್ತು ಉರ್ದು ಭಾಷೆ ಸೇರಿದಂತೆ ಭಾರತದ 10 ಭಾಷೆಗಳಲ್ಲಿ ತನ್ನ ಉತ್ಪನ್ನಕ್ಕೆ ವ್ಯಾಪಾರಿ ಚಿಹ್ನೆಯನ್ನು ನೊಂದಾಯಿಸಿಕೊಂಡಿದೆ.
ಭಾರತದಲ್ಲಿ ಈಗ ಕೆಫೆ ಕಾಫಿ ಡೇ, ಬ್ಯಾರಿಸ್ಟಾ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಕೋಸ್ಟಾ ಕಾಫಿ ಪರಿಮಳಕ್ಕೆ ಮಧ್ಯಮ ವರ್ಗದ ಜನತೆ ಕೂಡ ಮನಸೋಲುತ್ತಿದ್ದಾರೆ. ಹೆಂಡತಿ ಮಕ್ಕಳೊಡಗೂಡಿಯೋ, ಇನಿಯನೊಡಗೂಡಿಯೋ ಇಂಥ ಹೊಟೇಲಿನಂತಲ್ಲದ ಹೊಟೇಲಿನಲ್ಲಿ ಕುಳಿತು ವಾರಾಂತ್ಯದಲ್ಲಿ ಕಾಫಿ ಹೀರಿ ಹೋಗುವುದು ಫ್ಯಾಷನ್ ಆಗಿಬಿಟ್ಟಿದೆ. ಭಾರತದ ಮಾರುಕಟ್ಟೆಯ ಅಗಾಧತೆಯನ್ನು ಮನಗಂಡಿರುವ ಸ್ಟಾರ್‌ಬಕ್ಸ್ ಕೂಡ ಭಾರತಕ್ಕೆ ಅಡಿಯಿಡಲು ತುದಿಗಾಲ ಮೇಲೆ ನಿಂತಿದೆ.
ಆದರೆ, ವಿದೇಶಿ ಬಂಡವಾಳ ಹೂಡಿಕೆ ಕಂಪನಿಗಳಿಗೆ ಪರವಾನಗಿ ನೀಡುವ ವಿದೇಶಿ ಬಂಡವಾಳ ಹೂಡಿಕೆ ಪ್ರೋಮೋಷನ್ ಬೋರ್ಡ್ ಕೆಲ ತಗಾದೆ ತೆಗೆದಿದ್ದರಿಂದ ಸ್ಟಾರ್‌ಬಕ್ಸ್ ಸದ್ಯಕ್ಕೆ ಕಾಲು ತೆಗೆದಿದೆ. ಸ್ಟಾರ್‌ಬಕ್ಸ್ ಭಾರತಕ್ಕೆ ಕಾಲಿಡುತ್ತಿರುವ ವಾಸನೆ ಸಿಕ್ಕದ್ದೇ, ಕಾಫಿ ಉತ್ಪನ್ನಕ್ಕೆ ಸಂಬಂಧವೇ ಇಲ್ಲದ ಹರ್ಬಲ್ ಸೌಂದರ್ಯವರ್ಧಕಗಳ ಮಾರಾಟಗಾರ್ತಿ ಶಹನಾಜ್ ಹುಸೇನ್ ಸ್ಟಾರ್‌ಸ್ಟ್ರಕ್ ಎಂಬ ಹೆಸರಿನಲ್ಲಿ ವ್ಯಾಪಾರ ಚಿಹ್ನೆಯನ್ನು ನೊಂದಾಯಿಸಿಕೊಂಡಿದ್ದಾರೆ. ಈ ಟ್ರೇಡ್ ಮಾರ್ಕ್ ಹೆಸರುಗಳಿಗೆ ಸಂಬಂಧಿಸಿದಂತೆ ಅನೇಕ ದಾವೆಗಳನ್ನು ಸ್ಟಾರ್‌ಬಕ್ಸ್ ಕಂಪನಿ ಭಾರತದಲ್ಲಿ ಹೂಡಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 10 ಭಾರತೀಯ ಭಾಷೆಗಳಲ್ಲಿ ಟ್ರೇಡ್‌ಮಾರ್ಕನ್ನು ರಿಜಿಸ್ಟರ್ ಮಾಡಿಸಿಕೊಂಡಿದೆ.
ವಿದೇಶಿ ಕಂಪನಿಗಳಾದ ಮ್ಯಾಕ್ ಡೊನಾಲ್ಡ್ ಮತ್ತು ವಾಲ್ ಮಾರ್ಟ್ ಕಂಪನಿಗಳು ಕೂಡ ವ್ಯಾಪಾರಿ ಚಿಹ್ನೆಗೆ ಸಂಬಂಧಿಸಿದಂತೆ ಅನೇಕ ತೊಡಕುಗಳನ್ನು ಭಾರತದಲ್ಲಿ ಎದುರಿಸಿವೆ. ವಾಲ್ ಮಾರ್ಟ್ ಅಂತೂ ನೂರಕ್ಕೂ ಹೆಚ್ಚಿನ ಉತ್ಪನ್ನಗಳಿಗೆ ವ್ಯಾಪಾರಿ ಚಿಹ್ನೆಯನ್ನು ಭಾರತದಲ್ಲಿ ನೊಂದಾಯಿಸಿಕೊಂಡಿದ್ದು, ವಾಲ್ ಮಾರ್ಟ್ ಎಂಬ ಹೆಸರು ಮಾತ್ರವಲ್ಲ ಆ ಹೆಸರನ್ನು ಧ್ವನಿಸುವ ಕಾಲ್ ಮಾರ್ಟ್, ಮಾಲ್ ಮಾರ್ಟ್ ಮುಂತಾದ ಯಾವ ಹೆಸರು ಬಳಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಗಮನಿಸಿ, ಇಲ್ಲೂ ಕನ್ನಡ ಭಾಷೆಗೆ ಮಾನ್ಯತೆ ಸಿಕ್ಕಿಲ್ಲ! ಇರಲಿ, ಈ ಅಂತಾರಾಷ್ಟ್ರೀಯ ಬ್ರಾಂಡಿನ ಕಾಫಿ ದೇಸೀ ಸೊಗಡಿನ ಕೊಡಗಿನ ಕಾಫಿಗೆ ಸರಿಸಾಟಿಯಾಗಬಲ್ಲದೆ? ಗಾಸಿಪ್ಪು ಕಿವಿಯಿಂದ ಕಿವಿಗೆ ದಾಟುವುದನ್ನು, ಕಾಫಿ ಪರಿಮಳ ಹಬ್ಬುವುದನ್ನು ತಡೆಯಲು ಯಾರಿಂದ ಸಾಧ್ಯ? ಸುಮ್ಮನೆ ಗಾಸಿಪ್ಪು ಕೇಳಿಕೊಳ್ಳುತ್ತ, ಸ್ಟಾರ್‌ಬಕ್ಸ್ ಕನ್ನಡ ಭಾಷೆಯಲ್ಲೇಕೆ ಟ್ರೇಡ್‌ಮಾರ್ಕ್ ನೊಂದಾಯಿಸಿಲ್ಲ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಸುಮ್ಮನೆ ಬಿಸಿಬಿಸಿ ದೇಸೀ ಕಾಫಿಯನ್ನೇ ಸಿಪ್ಪು ಮಾಡೋದು ಹಿತ, ಅಲ್ವಾ?
(ಏಜೆನ್ಸೀಸ್)












Click it and Unblock the Notifications