ಎಸ್ಎಮ್ಎಸ್, ಈಮೇಲ್ ಮೂಲಕ ಸಂಪರ್ಕಕ್ಕೆ ಗ್ರಾಹಕರ ಆಗ್ರಹ
ಮುಂಬೈ, ಮಾ.26 : ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಸರಿಯಾದ ಸಮಯಕ್ಕೆ ನಿಮಗೆ ತಲುಪಿಲ್ಲವೆಂದಿಟ್ಟುಕೊಳ್ಳಿ. ನೀವು ಸಂದಾಯ ಮಾಡಬೇಕಾಗಿರುವ ಮೊತ್ತ, ಕೊನೆಯ ದಿನಾಂಕ ಮತ್ತಿತರೆ ಮಾಹಿತಿ ತಿಳಿದುಕೊಳ್ಳಬೇಕೆಂದು ಗ್ರಾಹಕ ಸೇವೆಗೆ ಫೋನಾಯಿಸುತ್ತೀರಿ. ಸಂಪರ್ಕ ಸಾಧಿಸಿದ ಕೂಡಲೆ ನಾಲ್ಕಾರು ಹಂತಗಳನ್ನು ದಾಟಿದರೂ ನಿಮಗೆ ಅಗತ್ಯವಾಗಿ ಬೇಕಾದ ಮಾಹಿತಿ ಸಿಗುವುದೇ ಇಲ್ಲ. ಗ್ರಾಹಕ ಸೇವಾ ಎಕ್ಸಿಕ್ಯೂಟಿವ್ ಜೊತೆ ಮಾತನಾಡಬೇಕೆಂದು ದೂರವಾಣಿ ತಿಳಿಸಿದ ನಂಬರ್ ಒತ್ತಿದಾಗ "ಗ್ರಾಹಕ ಸೇವಾ ಎಕ್ಸಿಕ್ಯೂಟಿವ್ ಇನ್ನೊಂದು ಲೈನ್‌ನಲ್ಲಿ ಕಾರ್ಯನಿರತರಾಗಿದ್ದಾರೆ. ನಿಮ್ಮ ವೇಟಿಂಗ್ ಕಾಲಾವಧಿ ಐದು ನಿಮಿಷ. ಅಲ್ಲಿಯವರೆಗೆ ಕಾಯಬಹುದು ಅಥವಾ ನಂತರ ಕಾಲ್ ಮಾಡಬಹುದು" ಎಂಬ ಸಂದೇಶ ಮತ್ತೆ ಬರುತ್ತದೆ. ಎಷ್ಟೇ ಬಾರಿ ಪ್ರಯತ್ನ ಮಾಡಿದರೂ ತ್ವರಿತಗತಿಯಲ್ಲಿ ನಿಮಗೆ ಬೇಕಾದ ಅಗತ್ಯ ಮಾಹಿತಿ ಸಿಗುವುದೇ ಇಲ್ಲ.
ಇದು ಒಂದು ಉದಾಹರಣೆ ಮಾತ್ರ. ಪ್ರತಿ ಉತ್ಪನ್ನಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮಾಹಿತಿ ಪಡೆಯಲು ಕಷ್ಟಪಡುವಂಥ ಪರಿಸ್ಥಿತಿ ಎದುರಾಗಿದೆ. ಸಾಕಷ್ಟು ಸೇವಾ ತೆರಿಗೆ ಕಟ್ಟಿದರೂ ನಿಮಗೆ ತಕ್ಷಣ ಮಾಹಿತಿ ಅಥವಾ ಸೇವೆ ದೊರೆಯುವುದೇ ಇಲ್ಲ. ಸಂಪರ್ಕ ಮಾಧ್ಯಮದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳಾಗಿದ್ದರೂ ಓಬೀರಾಯನ ಕಾಲದ ಸೇವಾ ಪದ್ಧತಿಗಳೇ ಇನ್ನೂ ಜಾರಿಯಲ್ಲಿವೆ. ಸೇವಾದರವನ್ನು ಸಂದಾಯ ಮಾಡುವುದಕ್ಕೆ ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲ ಆದರೆ ಸೇವೆ ತಕ್ಷಣ ದೊರೆಯಬೇಕೆನ್ನುವುದು ಗ್ರಾಹಕರ ಆಗ್ರಹ. ಈ ಫಾಸ್ಟ್ ಜಮಾನಾದಲ್ಲಿ ಗ್ರಾಹಕರೇ ದೊರೆಗಳು. ದೊರೆಗಳ ಅಗತ್ಯಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಕಂಪನಿಗಳಿಗೇ ಗೋಲಿ ಮಾರೊ ಎನ್ನುತ್ತಿದ್ದಾರೆ ಗ್ರಾಹಕರು.
ಜೆನೆಸಿಸ್ ಟೆಲಿಕಮ್ಯುನಿಕೇಷನ್ ಲ್ಯಾಬೊರೇಟರೀಸ್ ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ಅಧ್ಯಯನದ ಪ್ರಕಾರ, ಶೇ.79ರಷ್ಟು ಗ್ರಾಹಕರು ಕಂಪನಿಯೊಡನೆ ಈ-ಮೇಲ್ ಮುಖಾಂತರ ಸಂಪರ್ಕ ಸಾಧಿಸಲು ಇಚ್ಛಿಸಿದರೆ, ಶೇ.41ರಷ್ಟು ಗ್ರಾಹಕರು ಎಸ್ಎಮ್ಎಸ್ ಮುಖಾಂತರ ಕಂಪನಿಯೊಡನೆ ಮಾತುಕತೆ ನಡೆಸಲು ಬಯಸುತ್ತಾರೆ. ಅಂಗೈಯಲ್ಲಿ ಮೊಬೈಲ್ ಇರುವಾಗ ಫೋನ್ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವ ವ್ಯವಧಾನವಾದರೂ ಎಲ್ಲಿರುತ್ತದೆ. ಹೋಗಲಿ ಅಗತ್ಯವಾದರೂ ಎಲ್ಲಿದೆ?
ಗ್ರಾಹಕರ ವಿಶ್ವಾಸ ಗಳಿಸಬೇಕಾದರೆ ಕಂಪನಿಗಳು ಉತ್ತಮ ಸಂಪರ್ಕ ವ್ಯವಸ್ಥೆ ಇಟ್ಟುಕೊಳ್ಳುವುದು ಉತ್ತಮ ಎಂದು ಶೇ.50ರಷ್ಟು ಗ್ರಾಹಕರು ಬಯಸಿದ್ದರೆ, ಶೇ.38ರಷ್ಟು ಗ್ರಾಹಕರು ದುರ್ಬಲ ಸಂಪರ್ಕ ವ್ಯವಸ್ಥೆ ಹೊಂದಿರುವ ಕಂಪನಿಯೊಡನೆ ಮುಂದೆ ಯಾವುದೇ ರೀತಿಯಲ್ಲಿ ವ್ಯವಹರಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಗ್ರಾಹಕರ ಇಷ್ಟ, ಕಷ್ಟ, ನಿರಾಶೆ, ಬೇಡಿಕೆ, ಆಟೋಮೇಟೆಡ್ ಸೇವೆ, ಗ್ರಾಹಕ ಸೇವಾ ಕೇಂದ್ರ ಕಾರ್ಯಕ್ಷಮತೆಗಳ ಬಗ್ಗೆ ದೇಶದಾದ್ಯಂತ ಜೆನೆಸಿಸ್ ಸರ್ವೇ ಮಾಡಿ ಮಾಹಿತಿ ಸಂಗ್ರಹಿಸಿದೆ. ಗ್ರಾಹಕರು ತ್ವರಿತಗತಿಯಲ್ಲಿ ಸೇವೆ ನೀಡುವ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸೇವೆಯತ್ತ ಒಲವು ತೋರಿಸಿದ್ದಾರೆ. ಅದರಲ್ಲೂ ಈ-ಮೇಲ್ ಮತ್ತು ಎಸ್ಎಮ್ಎಸ್‌ಗಳ ಮುಖಾಂತರ ಸೇವೆ ಪಡೆಯಲು ಆಸಕ್ತಿ ತೋರಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications