ಮುಂದಿನ ತಿಂಗಳು ಪೆಟ್ರೋಲ್, ಡೀಸೆಲ್‌ಗಳ ದರ ಏರಿಕೆ?
ನವದೆಹಲಿ, ಜ.3: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಬುಧವಾರ (ಜ.2) ಬ್ಯಾರಲ್ (159ಲೀಟರ್) ಒಂದಕ್ಕೆ 100 ಡಾಲರ್ ತಲುಪಿದೆ. ಮೂಲಗಳ ಪ್ರಕಾರ ಫೆಬ್ರವರಿಯಿಂದ ಪ್ರತಿ ಲೀಟರ್ ಪೆಟ್ರೋಲ್‌ಗೆ 4 ರೂ, ಡೀಸೆಲ್‌ಗೆ 2 ರೂ.ನಷ್ಟು ಏರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.
ಈ ಹಿಂದೆ 2006ರ ಜೂನ್ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸರ್ಕಾರ ಹೆಚ್ಚಿಸಿತ್ತು. ಸರಕಾರಿ ಸ್ವಾಮ್ಯದ ಉದ್ದಿಮೆಗಳು ಎದುರಿಸುತ್ತಿರುವ ಭಾರಿ ಪ್ರಮಾಣದ ನಷ್ಟದ ಹಿನ್ನಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಎಂ.ಎಸ್. ಶ್ರೀನಿವಾಸ್ ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಟದಿಂದ 69,753 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸುತ್ತಿವೆ. ಈ ಸಂಬಂಧ ನಿರ್ಧಾರ ಕೈಗೊಳ್ಳಲು ಪ್ರಧಾನಿ ಮನಮೋಹನ್ ಸಿಂಗ್ ಅವರು ವಿದೇಶಾಂಗ ವ್ಯವಹಾರ ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಸಚಿವರ ಸಮಿತಿ ರಚಿಸಿದ್ದರು. ಈ ಸಮಿತಿಯು ಶೀಘ್ರದಲ್ಲೆ ಸಭೆ ಸೇರಿ ಬೆಲೆ ಏರಿಕೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications