ಸರ್ಕಸ್ ನೋಡಿ ಎಷ್ಟು ದಿನ ಆಯಿತು? ಒಂದ್ಸಲ ಹೋಗಿಬನ್ನಿ
ಬೆಂಗಳೂರು, ಡಿ.18 : ರಾಜಕೀಯ ಕಸರತ್ತು ಮತ್ತು ಸರ್ಕಸ್ಸುಗಳು ಮುಗಿದಿವೆ. ಇದೀಗ ರಾಜಧಾನಿಯಲ್ಲಿ ಅಸಲೀ ಸರ್ಕಸ್ ಆರಂಭಗೊಂಡಿದೆ. ಜುಂಬೋ ಸರ್ಕಸ್ ನಗರದ ಅರಮನೆ ಮೈದಾನದಲ್ಲಿ ತಲೆ ಎತ್ತಿದ್ದು, ಮುಂದಿನ 45ದಿನಗಳ ಕಾಲ ಪ್ರದರ್ಶನ ನಡೆಯಲಿದೆ.
ಉಸಿರು ಬಿಗಿಹಿಡಿದು ನೋಡುವಂಥ ಅನೇಕ ಕಸರತ್ತುಗಳನ್ನು ಸರ್ಕಸ್ ಕಲಾವಿದರು ಪ್ರದರ್ಶಿಸಲಿದ್ದಾರೆ. ಹುಲಿ,ಸಿಂಹ, ಚಿರತೆಗಳು ಸರ್ಕಸ್ ನಲ್ಲಿಲ್ಲ. ಆ ಕೊರತೆ ನೀಗಿಸಲು ಆಕರ್ಷಕ ರಷ್ಯನ್ ಬೆಡಗಿಯರನ್ನು ಬಳಸಿಕೊಳ್ಳಲಾಗಿದೆ. 350ಸದಸ್ಯರ ಸರ್ಕಸ್ ತಂಡದಲ್ಲಿ 120ಕಲಾವಿದರಿದ್ದಾರೆ. ಮಧ್ಯಾಹ್ನ 1, ಸಂಜೆ 4 ಮತ್ತು 7ಕ್ಕೆ ಪ್ರದರ್ಶನಗಳು ನಡೆಯುತ್ತಿವೆ. ಪ್ರವೇಶ ಶುಲ್ಕ : ರೂ.200, ರೂ.150, ರೂ.80 ಮತ್ತು ರೂ.40.
ಆನೆಗಳು ಕ್ರಿಕೆಟ್ ಆಡುವುದು ಸರ್ಕಸ್ ನ ಒಂದು ಪ್ರಮುಖ ವಿಶೇಷ. ಚಲನಚಿತ್ರ ಮತ್ತು ಟೀವಿ ಆರ್ಭಟದಿಂದ ಸರ್ಕಸ್ ಬಗ್ಗೆ ಈಗಿವರಿಗೆ ಆಸಕ್ತಿ ಕಡಿಮೆ.ಹೀಗಾಗಿ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಸಹಾ ತುಂಬಿದ ಪ್ರದರ್ಶನ ನಡೆಯಲಿಲ್ಲ ಎಂದು ಸರ್ಕಸ್ ತಂಡ ಅಭಿಪ್ರಾಯಪಟ್ಟಿದೆ. ಒಂದು ಸಲ ಸರ್ಕಸ್ ನೋಡಿ, ಪ್ರಯತ್ನ ಪಟ್ಟರೇ ಏನೆಲ್ಲ ಸಾಧ್ಯವಿದೆ ಎಂಬುದು ಮನವರಿಕೆಯಾಗುತ್ತದೆ, ಸರ್ಕಸ್ ಕಲಾವಿದರ ಬದುಕು ಸುಧಾರಿಸುತ್ತದೆ.
(ದಟ್ಸ್ ಕನ್ನಡ ವಾರ್ತೆ)