ಚೆನ್ನೈನತ್ತ ಹೊರಟ ಬೆಂಗಳೂರಿನ ಪ್ರೆಸ್ಟೀಜ್ ಗ್ರೂಪ್ಸ್
ಚೆನ್ನೈ ಡಿ.14 : ಬೆಂಗಳೂರು ಮೂಲದ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್ಸ್ ಈಗ ಐಟಿ ರಂಗಕ್ಕೆ ಲಗ್ಗೆ ಇಡುತ್ತಿದೆ. ಈ ಸಂಬಂಧವಾಗಿ ರಿಲೆಯನ್ಸ್ ಸಮೂಹ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಲ್ಲಿನ ಅಣ್ಣಾ ಸಲೈ ಐಟಿ ಅವರಣದಲ್ಲಿ ಹಲವು ರಿಯಲ್ ಎಸ್ಟೇಟ್ ಯೋಜನೆಗಳನ್ನು ಹಮ್ಮಿಕೊಂಡಿದೆ.
ಸುಮಾರು 5,00,000ಚ.ಅಡಿ ವಿಸ್ತೀರ್ಣದ ಐಟಿ ಪಾರ್ಕ್ ನಿರ್ಮಾಣ, ಮೂರು ಬೇಸ್ ಮೆಂಟ್ ಹಾಗೂ 12ಮಹಡಿಯ ಕಟ್ಟಡ ನಿರ್ಮಾಣ ಯೋಜನೆಯನ್ನು ಪ್ರೆಸ್ಟೀಜ್ ಸಂಸ್ಥೆ ಹಮ್ಮಿಕೊಂಡಿದೆ. ಚೆನ್ನೈನ ಟೆನಂಪೇಟ್ ನಲ್ಲಿ ಸುಮಾರು 115 ಕೋಟಿ ವೆಚ್ಚದಲ್ಲಿ ರಿಲೆಯನ್ಸ್ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಲ್ಲದೆ ವಡಪಳನಿ ಸಮೀಪ ಸುಮಾರು 350ಕೋಟಿ ರೂ.ವೆಚ್ಚದಲ್ಲಿ ಫೋರಮ್ ಮಾಲ್ ಸ್ಥಾಪನೆಗೆ ಪ್ರೆಸ್ಟೀಜ್ ಕಂಪೆನಿ ಮುಂದಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ತಿಳಿಸಿದ್ದಾರೆ.
ಬೆಂಗಳೂರು ಮೂಲದ ಕಂಪೆನಿಯೊಂದು ನಗರದಿಂದ ಹೊರಗೆ ಹೊರರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿರುವುದು ಹಾಗೂ ಅದಕ್ಕೆ ರಿಲೆಯನ್ಸ್ ಸಂಸ್ಥೆಯ ಸಹಭಾಗಿತ್ವ ದೊರೆತಿರುವುದು ಸ್ಥಳೀಯ ಐಟಿ ಚಿಂತಕರಿಗೆ ಕುತೂಹಲಕರ ಚರ್ಚಾ ವಿಷಯವಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications