ಅಂತರ್ಜಾಲದಲ್ಲಿ ಹೆಚ್ಚಿನ ಚಾರಣ; ಅಪಾಯಕ್ಕೆ ಆಹ್ವಾನ!
ನವದೆಹಲಿ, ಡಿ. 3 : ಯಾವುದೂ ಅತಿಯಾದರೆ ಗತಿಕೇಡು. ಪ್ರತಿಯೊಂದು ಕೆಲಸದಲ್ಲಿ, ಯಾವೊಂದು ಹವ್ಯಾಸದಲ್ಲಿ ಹಿತ ಮಿತವಿದ್ದರೆ ಕ್ಷೇಮ. ಹೆಚ್ಚಾದರೆ ಚಟ ಭಯಂಕರ. ಚಟಗಳು ಉಂಟುಮಾಡುವ ಹಾನಿ ಒಂದೆರಡಲ್ಲ. ಚಟವೆಂದ ಮಾತ್ರಕ್ಕೆ ಸಿಗರೇಟು ಬೀಡಿ, ಹೆಂಡ, ಕಾಫಿ, ಕೋಕು, ಸಿಹಿತಿಂಡಿ ಮುಂತಾದವೇ ಆಗಬೇಕೆಂದೇನಿಲ್ಲ. ಈಚೀಚೆಗೆ ಮೊಬೈಲು ಫೋನು, ಇಂಟರ್ ನೆಟ್, ಟಿವಿ, ಕಿವಿಗೆ ಎನ್ ಹ್ಯಾನ್ಸರ್ ನೇತುಹಾಕಿಕೊಂಡು ಹಾಡು ಕೇಳುತ್ತಲೇ ಇರುವುದು, ಕಾರನ್ನು ಸ್ಪೀಡಾಗಿ ಓಡಿಸುವುದು ಚಟ ಕೆಟಗರಿಯ ವ್ಯಾಪ್ತಿಗೆ ಬರುತ್ತದೆ. ಈ ಹವ್ಯಾಸಕ್ಕೆ ನೀವು ಇವತ್ತಿನಿಂದಲೇ ಕೊಂಚ ಬ್ರೇಕು ಹಾಕಿಪ್ಪಾ. ಚಟ ಚಕ್ರವರ್ತಿ ಎಂಬ ಬಿರುದನ್ನು ನಿರಾಕರಿಸಿ.
ಹೊಸ ಚಟಗಳ ವ್ಯಾಪ್ತಿಗೆ ಬರುವ ತಂತ್ರಜ್ಞಾನ ಅವಲಂಬಿತ ನೋವುಗಳಲ್ಲಿ ಅಂತರ್ ಜಾಲ ಚಾರಣದ ಗೀಳು ಪ್ರಮುಖ. ಬಿಎಸ್ ಎನ್ ಎಲ್ ಅಥವಾ ಕೇಬಲ್ ಅಥವಾ ಡಿಎಸ್ ಎಲ್ ಸಂಪರ್ಕ ಇದ್ದರಂತೂ ಸರ್ಫ್ ಮಾಡುವ ಚಟಕ್ಕೆ ಅಂಕುಶವೇ ಇರುವುದಿಲ್ಲ. ಹಗಲೂ ಮೂರು ಹೊತ್ತು ಪಿಸಿ ಆನ್ ಮಾಡಿಕೊಂಡು ಬ್ರೌಸ್ ಮಾಡುತ್ತಿದ್ದರೆ ಅದು ಚಟವಾಗಿ ಪರಿಣಮಿಸುತ್ತದೆ. ಇಂಟರ್ ನೆಟ್ ಬ್ರೌಸಿಂಗ್ ಮಾಡುವ ಉದ್ಯೋಗ ಮತ್ತು ಹವ್ಯಾಸ ಚಟಕ್ಕೆ ತಿರುಗಿದರೆ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.
"ಸೈನ್ಸ್ ಡೈಲಿ" ಪತ್ರಿಕೆ ಇತ್ತೀಚೆಗೆ ಇಂಥದೊಂದು ಸಂಶೋಧನೆ, ಸಮೀಕ್ಷೆ ನಡೆಸಿದೆ. ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳ ಪ್ರಕಾರ ಇಂಟರ್ ನೆಟ್ ಚಟ ಉದ್ವೇಗವನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡ ಉಂಟಾಗಿ ಕ್ರಮೇಣ ಮನುಷ್ಯ ತೀವ್ರತಮ ಖಿನ್ನತೆಗೆ ತುತ್ತಾಗುತ್ತಾನೆ. ಹೀಗಾಗದಿರುವಂತೆ ನೀವು ಯಾವ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿಯಲು ಈ ವಿಡಿಯೋ ನೋಡಿದರೆ ಲೇಸು. ನೋಡಿದ ಆನಂತರದಲ್ಲಿ ಕಂಪ್ಯೂಟರ್ ಆಫ್ ಮಾಡಿರಿ. ಮತ್ತೆ ಸಾಯಂಕಾಲ ನೋಡಿದರಾಯಿತು!












Click it and Unblock the Notifications