ಬರಲಿದೆ ಬರಲಿದೆ : ಹಾದಿಬೀದಿಯಲ್ಲಿ ಉಚಿತ ಇಂಟರ್ನೆಟ್
ಬೆಂಗಳೂರು, ಡಿ. 3 : ಉಚಿತವಾಗಿ ಅಂತರ್ಜಾಲ ಚಾರಣ ಮಾಡುವ ಸೌಲಭ್ಯ ಭಾರತ ದೇಶಾದ್ಯಂತ ಲಭ್ಯವಾಗುವ ದಿನಗಳು ದೂರವಿಲ್ಲ. ಅಹಮದಾಬಾದ್ ಮೂಲದ ಅಹೆಂ (Ahem) ಸಾಫ್ಟ್ ವೇರ್ ಸಂಸ್ಥೆಯು ಭಾರತಾದ್ಯಂತ 150ನಗರಗಳಲ್ಲಿ ಇಂಟರ್ ನೆಟ್ ಗೂಡುಗಳನ್ನು ತೆರೆಯುವ ಯೋಜನೆ ರೂಪಿಸಿದ್ದು ಚಾರಣಿಗರಿಗೆ ಅದು ಉಚಿತವಾಗಿ ಸೇವೆ ನೀಡಲಿದೆ.
ಮುಂದಿನ ಐದು ವರ್ಷಗಳ ಈ ಯೋಜನಾ ಅವಧಿಯಲ್ಲಿ ಸಂಸ್ಥೆಯು 275ಕೋಟಿ ರೂಪಾಯಿಗಳ ಬಂಡವಾಳ ತೊಡಗಿಸಲಿದ್ದು ಸುಮಾರು 200ಕೋಟಿ ರೂ.ಲಾಭಗಳಿಸುವ ಉದ್ದೇಶ ಹೊಂದಿದೆ. ಮುಖ್ಯವಾಗಿ ಆನ್ ಲೈನ್ ಮತ್ತು ಆಫ್ ಲೈನ್ ಜಾಹೀರಾತುಗಳ ಮೂಲಕ ಆದಾಯ ಗಳಿಸಿವ ನಿರೀಕ್ಷೆ ಕಂಪನಿಯದು. ತನ್ನ ಇಂಟರ್ನೆಟ್ ಅಂಗಡಿಗಳಿಗೆ ಅಹೆಂ "ನೆಟ್ ಹಾಟ್ ಜೋನ್" ಎಂದು ಹೆಸರಿಟ್ಟಿದೆ. ಜನಸಂದಣಿ ಸಾಮಾನ್ಯವಾಗಿ ಹೆಚ್ಚಾಗಿರುವ ಬೀದಿ, ಬಜಾರು, ಕಾಲೋನಿಗಳಲ್ಲಿ ಅಂಗಡಿಗಳನ್ನು ತೆರೆಯಲಾಗುತ್ತಿದ್ದು ಮೊದಲಿಗೆ ಈ ಯೋಜನೆ ಅಹಮದಾಬಾದ್, ಸೂರತ್, ವಡೋದರ, ಮತ್ತು ರಾಜ್ ಕೋಟ್ ನಗರಗಳಲ್ಲಿ ಆರಂಭವಾಗಲಿದೆ.
ನೆಟ್ ಹಾಟ್ ಜೋನ್ ಗಳಲ್ಲಿ 5ಎಲ್ ಸಿಜಿ ಮಾನಿಟರ್ಸ್ ಮತ್ತು ಅದಕ್ಕೆ ಅಗತ್ಯವಾದ ನುರಿತ ಸಿಬ್ಬಂದಿಗಳಿರುತ್ತಾರೆ. ಇಂಟರ್ ನೆಟ್ ಚಾರಣಕ್ಕೆ, ಇಮೇಲ್ ಪತ್ರವ್ಯವಹಾರ ಮಾಡುವವರಿಗೆ , ಡೌನ್ ಲೋಡ್ ಬೇಕಾದವರಿಗೆ, ಸಿಡಿ ಕಾಪಿ ಮುಂತಾದ ಅನೇಕಾನೇಕ ವೆಬ್ ಸಂಬಂಧಿ ಚಟುವಟಿಕೆಗಳಿಗೆ ಸಿಬ್ಬಂದಿ ನೆರವಾಗುತ್ತಾರೆ.
(ಮೂಲ : ದಿ ಇಕಾನಿಮಿಕ್ ಟೈಮ್ಸ್ಸ್)












Click it and Unblock the Notifications