ಮೂಗುನತ್ತಿನ ಬೆಡಗಿ ಸಾನಿಯಾಗೀಗ ಇಪ್ಪತ್ತರ ಮೇಲೆ ಎರಡು
ಹೈದರಾಬಾದ್, ನ.15: ಬರೀ ಆಟದಲ್ಲಷ್ಟೇ ಅಲ್ಲ ಮೈಮಾಟಕ್ಕೂ ಹೆಸರಾದ ಸಾನಿಯಾ ಮಿರ್ಜಾ ಇಂದು ಗುರುವಾರ (ನ.15) ತಮ್ಮ 22ನೇ ವರ್ಷಕ್ಕೆ ಅಡಿಯಿಟ್ಟರು. ಹೈದರಾಬಾದ್‌ನ ತಮ್ಮ ಮನೆಯಲ್ಲಿ ತಂದೆ, ತಾಯಿ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಆಕರ್ಷಿಸುವ ಮೈಮಾಟ ಹಾಗೂ ಬಿರುಸಿನ ಆಟಕ್ಕೆ ಹೆಸರಾದ ಸಾನಿಯಾ ಸ್ವಲ್ಪ ಸಮಯದಲ್ಲೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡವರು. ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಕೆಲಕಾಲ ವಿವಾದವೂ ತಲೆದೋರಿತ್ತು. ಕೆಲವೊಂದು ಇಸ್ಲಾಂ ಸಂಘಟನೆಗಳು ಈಕೆಯ ವಿರುದ್ಧ ಸಿಡಿದೆದ್ದವು. ಹಾಗೆಯೇ ಪತ್ವಾವನ್ನು ಹೊರಡಿಸಿದವು. ಸಾಲದಕ್ಕೆ ಹೈದರಾಬಾದಿನ ಕೆಲವು ಉಲೇಮಾಗಳು ಸಾನಿಯಾಳ ಕಡೆ ಕೆಂಗಣ್ಣಿನಿಂದ ನೋಡಿದ್ದವು. ಆದರೆ ಎಲ್ಲವೂ ಈಗ ತಣ್ಣಗಾಗಿವೆ.
ತನ್ನ ಆರನೇ ವಯಸ್ಸಿಗೇ ಟೆನಿಸ್ ಮೈದಾನಕ್ಕಿಳಿದ ಸಾನಿಯಾ ವಯಸ್ಸಿಗೆ ಮೀರಿದ ಸಾಧನೆಯನ್ನು ಮಾಡಿದ್ದಾರೆ. ಹುಟ್ಟಿದ್ದು ಮುಂಬೈಯಲ್ಲಿ, ನ.15, 1986. ಬೆಳದಿದ್ದೆಲ್ಲಾ ಹೈದರಾಬಾದ್‌ನಲ್ಲೆ. ಈಕೆಯ ಟೆನಿಸ್ ಕೋಚ್ ಸ್ವತಃ ತಂದೆ ಇಮ್ರಾನ್ ಮಿರ್ಜಾ. 2003ರಲ್ಲಿ ಪಕ್ಕಾ ತಮ್ಮ ಟೆನಿಸ್ ವೃತ್ತಿ ಜೀವನವನ್ನು ಪ್ರಾರಂಭಿಸಿ ಟೆನಿಸ್ ಡಬಲ್ಸ್‌ನಲ್ಲಿ 20ನೇ ಶ್ರೇಯಾಂಕ ಹಾಗೂ ಸಿಂಗಲ್ಸ್‌ನಲ್ಲಿ 27ನೇ ಶ್ರೇಯಾಂಕವನು ಗಳಿಸಿದಳು.
(ಏಜನ್ಸೀಸ್)












Click it and Unblock the Notifications