ಮಹಿಳೆಯರೇ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಬೇಕಾ?
ಬೆಂಗಳೂರು, ನ.15 : ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕಲ್ಯಾಣ ಕ್ಷೇತ್ರದಲ್ಲಿ ಆಸಾಧಾರಣ ಸೇವೆ ಸಲ್ಲಿಸಿರುವ ಸ್ವಯಂ ಸೇವಾ ಸಂಸ್ಥೆಗೆ ನೀಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ವೈಯಕ್ತಿಕ ಪ್ರಶಸ್ತಿ ಹಾಗೂ ಅಪಾರ ಧೈರ್ಯ ಸಾಹಸ ತೋರಿದ ಮಹಿಳೆಗೆ ನೀಡುವ 'ವೀರ ಮಹಿಳೆ" ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ಅಭಿವೃದ್ಧಿ, ಕಲೆ, ಶಿಕ್ಷಣ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಳೆದ 5ವರ್ಷಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿರುವ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತದೆ. ಆಪತ್ಕಾಲದಲ್ಲಿ ಸಮಯಪ್ರಜ್ಞೆಯಿಂದ ಅಪಾರ ಧೈರ್ಯ ಸಾಹಸ ತೋರಿದ ಮಹಿಳೆಗೆ 'ವೀರ ಮಹಿಳೆ" ಪ್ರಶಸ್ತಿ ನೀಡಲಾಗುವುದು.
ಉತ್ತಮ ಸಂಸ್ಥೆಗೆ ನೀಡುವ ಪ್ರಶಸ್ತಿ ರೂ.25,000ನಗದು ಹಾಗೂ ಪ್ರಶಸ್ತಿ ಪತ್ರ, ಪ್ರತೀ ಕ್ಷೇತ್ರಕ್ಕೂ ವೈಯಕ್ತಿಕ ಪ್ರಶಸ್ತಿ ರೂ. 10,000ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ವೀರ ಮಹಿಳೆ ಪ್ರಶಸ್ತಿ ರೂ. 10,000ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
2006-07ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು/ಸಹಾಯಕ ನಿರ್ದೇಶಕರಿಗೆ ಡಿಸೆಂಬರ್ 1ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು/ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications