ಜನನ ನಿಯಂತ್ರಣ : ಭಾರತೀಯ ಪುರುಷರ ನಂಬಿಕೆಗಳು!
ನವದೆಹಲಿ, ನ.06: ಬಸಿರು ತಡೆಯುವ ಹಾಗೂ ಮಕ್ಕಳ ನಡುವೆ ಅಂತರ ಕಾಪಾಡುವ ಯೋಜನೆಗಳು ಏನಿದ್ದರೂ ಮಹಿಳೆಯರ ಮುತುವರ್ಜಿಗೆ ಬಿಟ್ಟಿದ್ದು. ಜನನ ನಿಯಂತ್ರಣ ಯೋಜನೆಗಳು ನಮಗೆ ಸಂಬಂಧಿಸಿದ್ದಲ್ಲ ಆ ಉಸಾಬರಿ ನಮಗ್ಯಾಕೆ ಎಂಬ ಧೋರಣೆ ಭಾರತೀಯ ಪುರುಷರದ್ದು ಎಂದು ಸಮೀಕ್ಷೆಯೊಂದು ತಿಳಿಸಿದೆ.
ಮಕ್ಕಳಾಗದಂತೆ ಮಾಡುವ ಚಿಕಿತ್ಸೆಗಳು ಸ್ತ್ರೀ ಪುರುಷರಿಬ್ಬರಿಗೂ ಇವೆಯಾದರೂ ಬರೀ ಮಹಿಳೆಯರಷ್ಟೇ ವಂಧ್ಯಾತ್ವ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಜನನ ನಿಯಂತ್ರಣ ಚಿಕಿತ್ಸೆಗಳೇನಿದ್ದರೂ ಅವರಿಗೇ ಬಿಟ್ಟಿದ್ದು ಎಂದು ಶೇ.22ರಷ್ಟು ಪುರುಷರು ನಂಬಿದ್ದಾರೆ. ಹಾಲುಣಿಸುವ ಮಹಿಳೆಯರು ಬಸಿರಾಗುವುದಿಲ್ಲ ಎಂದು ಇದರ ಅರ್ಧದಷ್ಟು ಪುರುಷರ ನಂಬುಗೆ ಎಂದು 'ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆ-ಭಾಗ 3ರ ವರದಿ ತಿಳಿಸಿದೆ.
ಪುರುಷರ ನಂಬಿಕೆಗಳು ಹೀಗಿದೆ :
*ಸ್ವಚ್ಛಂದ ಲೈಂಗಿಕತೆ ಅನುಭವಿಸಲು ಮಹಿಳೆಯರು ಗರ್ಭನಿರೋಧಕಗಳನ್ನು ಬಳಸುತ್ತಾರೆ ಎಂದು ಶೇ.16ರಷ್ಟು ಪುರುಷರು ನಂಬಿದ್ದಾರೆ.
*ಶೇ.97ರಷ್ಟು ಮಹಿಳೆಯರು ಮತ್ತು ಶೇ. 95ರಷ್ಟು ಪುರುಷರು ಜನನ ನಿಯಂತ್ರಣಕ್ಕೆ ಸ್ತ್ರೀ ವಂಧ್ಯಾತ್ವ ಚಿಕಿತ್ಸೆ ಸೂಕ್ತ ಎಂದು ನಂಬಿದ್ದಾರೆ.
*ಸ್ತ್ರೀ ವಂಧ್ಯಾತ್ವ ಚಿಕಿತ್ಸೆ ಬಿಟ್ಟರೆ ಬಸಿರು ತಡೆಯುವ ಇತರ ವಿಧಾನಗಳು ಅಷ್ಟಾಗಿ ಬಳಕೆಯಾಗುತ್ತಿಲ್ಲ. ಶೇ.61ರಷ್ಟು ಮಹಿಳೆಯರಿಗೆ ಹಾಗೂ ಶೇ.49ರಷ್ಟು ಪುರುಷರಿಗೆ ಜನನ ನಿಯಂತ್ರಣ ವಿಧಾನಗಳಾದ ವಂಕಿ, ಗರ್ಭನಿರೋಧಕ ಗುಳಿಗೆ ಮತ್ತು ಕಾಂಡೋಮ್‌ಗಳ ಬಗ್ಗೆ ಅರಿವಿದೆ.
*ಮಕ್ಕಳ ನಡುವೆ ಅಂತರ ಕಾಪಾಡುವಲ್ಲಿ ಗ್ರಾಮೀಣರಿಗಿಂತ ನಗರಪ್ರದೇಶದ ಜನರಿಗೆ ಹೆಚ್ಚು ತಿಳಿವಳಿಕೆ ಇದೆ. ಶೇ.74ರಷ್ಟು ನಗರ ಹಾಗೂ ಶೇ.54ರಷ್ಟು ಗ್ರಾಮೀಣ ಮಹಿಳೆಯರಿಗೆ ಮಕ್ಕಳ ನಡುವೆ ಅಂತರ ಕಾಪಾಡುವ ಮೂರು ವಿಧಾನಗಳೂ ತಿಳಿದಿವೆ ಎಂದು ಸಮೀಕ್ಷೆ ತಿಳಿಸುತ್ತದೆ. ದೇಶದ ಒಟ್ಟು 29 ರಾಜ್ಯಗಳ 26 ರಲ್ಲಿ ಸ್ತ್ರೀ ವಂಧ್ಯಾತ್ವ ಚಿಕಿತ್ಸೆಯೇ ಅತೀ ಬಳಕೆಯಲ್ಲಿರುವ ವಿಧಾನ ಎಂದು ಸಮೀಕ್ಷೆ ತಿಳಿಸುತ್ತದೆ.
(ಏಜನ್ಸೀಸ್)












Click it and Unblock the Notifications