ಕನ್ನಡ ನಾಮಫಲಕ ಪ್ರದರ್ಶಿಸದಿದ್ದರೆ 10ಸಾವಿರ ದಂಡ?
ಬೆಂಗಳೂರು : ಕನ್ನಡ ನಾಮಫಲಕ ಪ್ರದರ್ಶಿಸದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಈಗ 250 ರೂ. ದಂಡ ವಿಧಿಸಲಾಗುತ್ತಿದೆ. ದಂಡವನ್ನು 10ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಸದ್ಯದಲ್ಲಿಯೇ ಈ ಅಧಿಸೂಚನೆ ಹೊರಬೀಳುವ ಸಾಧ್ಯತೆಗಳಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕನ್ನಡ ನಾಮಫಲಕ ಪ್ರದರ್ಶಿಸದ ಅಂಗಡಿಗಳ ನೋಂದಣಿ ರದ್ದುಪಡಿಸಬೇಕು. ಕನ್ನಡವನ್ನು ನಿರ್ಲಕ್ಷ್ಯ ಮಾಡಿರುವ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ರಿಲೈಯನ್ಸ್, ಹಚ್, ಏರ್‌ಟೆಲ್ ಮತ್ತಿತರ ಸಂಸ್ಥೆಗಳ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದರು.
ಸುವರ್ಣ ಕರ್ನಾಟಕದ ವರ್ಷದಲ್ಲಿ ಎಲ್ಲೆಡೆಯೂ ಕನ್ನಡವೇ ಕಾಣುವಂತೆ ಮಾಡಲು ಪ್ರಾಧಿಕಾರ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಫಲಿತಾಂಶವನ್ನು ನಿರೀಕ್ಷಿಸಬಹುದು ಎಂದು ಸಿದ್ದಲಿಂಗಯ್ಯ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications