• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಚಿಟಿಕೆ ನೆಶ್ಯ

By Super
|

ನೌಕರಶಾಹಿಯ ಜತೆ ಶಾಮೀಲಾಗಿ ಇನ್ನೊಬ್ಬರಿಗೆ ಸೇರಿದ ಜಮೀನನ್ನು ನುಂಗುವುದು ಇವತ್ತು ಕರ್ನಾಟಕದಲ್ಲಿ ಒಂದು ದೊಡ್ಡ ದಂಧೆ. ಭೂಮಿ ವ್ಯವಹಾರದ ಹೆಸರಲ್ಲಿ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಅಲ್ಲಕಲ್ಲೋಲಗಳು ಒಂದೆರಡಲ್ಲ. ಮೂವತ್ತು ನಲವತ್ತು ಅಡಿ ನಿವೇಶನದಲ್ಲಿ ತಮ್ಮಪಾಡಿಗೆ ತಾವಿರುವವರನ್ನು ಈ ವ್ಯವಾರಗಳ ಬಿಸಿ ತಟ್ಟದೆ ಬಿಡುವುದಿಲ್ಲ. ಭೂಮಿ ವ್ಯವಹಾರಗಳ ಅಪರಾತಪರಗಳಲ್ಲಿ ಪೂಟು ಲಾಯರುಗಳಿಂದ ಮೊದಲಾಗಿ ಮಂತ್ರಿ ಮಹೋದಯರವರೆಗೆ ಎಲ್ಲರಿಗೂ ಆಸಕ್ತಿ. ಗೋಮಾಳಗಳನ್ನು ಆಪೋಶನ ತೆಗೆದುಕೊಳ್ಳುವುದರ ಜತೆಗೆ ನಗರ-ಪಟ್ಟಣ ಪ್ರದೇಶಗಳಲ್ಲಿರುವ ಸಾರ್ವಜನಿಕ ಭೂಮಿಯನ್ನು ಕಬಳಿಸುವುದಕ್ಕೆ ಕುತಂತ್ರಿಗಳು ನೆಲಮಾಳಿಗೆಯಲ್ಲಿ ನಿತ್ಯ ಹುನ್ನಾರ ನಡೆಸುವರು. ಬೆಂಗಳೂರು ಮಂಗಳೂರಿನಲ್ಲಂತೂ ಆಯಕಟ್ಟಿನ ಜಾಗೆಗಳಲ್ಲಿನ ಸರಕಾರಿ ಅಥವಾ ಖಾಸಗಿ ನಿವೇಶನ ಮತ್ತು ಹಳೆಯ ಕಟ್ಟಡಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ದುಡ್ಡಿರುವವರು ಮತ್ತು ದುಡ್ಡಿಲ್ಲದವವರು ಇಬ್ಬರೂ ದುಂಬಾಲು ಬೀಳುವರು. ಆಸ್ತಿ ತಮ್ಮ ಕೈ ತಪ್ಪುತ್ತದೆ ಎನ್ನುವಾಗ ಭೂಮಿ ಕುರಿತ ವ್ಯವಹಾರಗಳು ವ್ಯಾಜ್ಯಕ್ಕೆ ಬೀಳುವವು. ವ್ಯಾಜ್ಯ ನ್ಯಾಯಾಲಯಕ್ಕೆ ಹೋದರೆ ವಿವಾದ ಇತ್ಯರ್ಥವಾಗುವುದಕ್ಕೆ ಹಲವಾರು ವರ್ಷಗಳು ಬೇಕಾಗುವುದರಿಂದ ನ್ಯಾಯಾಲಯದ ಹೊರಗೆ ಅನೇಕ ವಿವಾದಗಳು ಬಗೆಹರಿಯುವುದುಂಟು. ದೊಡ್ಡ ದೊಡ್ಡ ಆಸ್ತಿ ಪರಭಾರೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಗೊಳಿಸುವ ಕರ್ಮಕಾಂಡದಲ್ಲಿ ರೌಡಿಗಳು ಪುರೋಹಿತರಾಗಿ ಕೆಲಸ ಮಾಡುತ್ತಾರೆ. ಒಂದು ರೌಡಿಗುಂಪು ತನ್ನ ತೋಳ್ಬಲದಿಂದ ಆಸ್ತಿಯನ್ನು ಪಟ್ಟಭದ್ರರ ಹೆಸರಿನಲ್ಲಿರುವಂತೆ ಖಾತಾ ಮಾಡಿಸಬಹುದು. ಆದರೆ, ವ್ಯವಹಾರದ ಎರಡೂ ಕಡೆ ನಿಂತಿರುವವರು ರೌಡಿ ಶಕ್ತಿಗಳನ್ನು ಔಟ್‌ಸೋರ್ಸ್‌ ಮಾಡಿಕೊಂಡಾಗ ಮಾರಣ ಹೋಮಗಳಾಗುತ್ತವೆ.

ಅಂಥ ಮಾರಣ ಹೋಮಗಳಲ್ಲಿ ಭಾಗಿಯಾಗುತ್ತಿದ್ದ ಒಬ್ಬ ರೌಡಿ ಬೆಕ್ಕಿನ ಕಣ್ಣು ರಾಜೇಂದ್ರ ಎಂಬಾತ ಮಂಗಳವಾರ ಬೆಂಗಳೂರಿನಲ್ಲಿ ಕೊಲೆಯಾದ. ಅವನಿಗೆ ಇತ್ತೀಚೆಗೆ 'ಸುಧಾರಿತ ರೌಡಿ' ಎನ್ನುವ ಬಿರುದನ್ನು ಯಾರೋ ಕೊಟ್ಟಿದ್ದರು.

ರಾಜೇಂದ್ರ ಸತ್ತ. ಆದರೆ, ಅವನ ಕತೆ ಮುಗಿಯುವುದರೊಂದಿಗೆ ಭೂಮಿ ಮಾಫಿಯಾದ ಕಬಂಧ ಬಾಹುಗಳು ಮೊಟಕಾಗುವುದಿಲ್ಲ.

-ಯಾರಾದರೂ ಸಾಯಲಿ, ನಮ್ಮ ಆಸ್ತಿ ಉಳಿಯಲಿ

ಬೆಂಗಳೂರು ಹೊರವಲಯದ ಆಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರೀ ಅನಾಥಾಶ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ' ಕನ್ನಡ ರಾಜ್ಯೋತ್ಸವ ನಾಡಿನ ಜನತೆಗೆ ದೊಡ್ಡ ಹಬ್ಬ. ಈ ಆಶ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ನೀವುಗಳು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಲಲಿತ ಕಲೆಗಳ ಕಲಿಯುವಿಕೆಗೆ ಹೆಚ್ಚು ಆದ್ಯತೆ ಕೊಡಬೇಕು, ನಿಮ್ಮ ನರನಾಡಿಗಳಲ್ಲಿ ಕನ್ನಡ ಅಭಿಮಾನ ತುಂಬಿಬರಲಿ ' ಎಂದು ಅನಾಥಾಶ್ರಮದ ಸಂಸ್ಥಾಪಕ ಎಂ. ವಜ್ರಮೂರ್ತಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

-ಮಕ್ಕಳು ಭಾಷಣ ಕಾರ್ಯಕ್ರಮದ ನಂತರ ಹಂಚಲಾದ ಸಿಹಿತಿಂಡಿ ತಿಂದು ಆಟಆಡಲು ಹೋದರು.

'ವಿದೇಶೀ ಕರೆನ್ಸಿ ಖಾತೆ ತೆಗೆಯಿರಿ. ಅದಕ್ಕೆ ಸ್ವಲ್ಪ ದುಡ್ಡು ತುಂಬಿ ಆನಂತರ ನಿಮ್ಮ ಖಾತೆಯ ವಿವರಗಳನ್ನು ನಮಗೆ ಕೊಡಿ. ನಾವು ನಿಮ್ಮ ಖಾತೆಗೆ ವಿದೇಶೀ ಹಣವನ್ನು ದಾನರೂಪದಲ್ಲಿ ನೀಡುತ್ತೇವೆ'

ಶಾಲೆ, ಆಸ್ಪತ್ರೆ, ಧಾರ್ಮಿಕ-ದತ್ತಿ ಸಂಘ-ಸಂಸ್ಥೆಗಳಿಗೆ ಈ ಮೇಲಿನಂತೆ ಆಮಿಷ ಒಡ್ಡುವ ದಗಲ್‌ಬಾಜಿಗಳ ಬಗ್ಗೆ ಎಚ್ಚರಿಕೆಯಿಂದಿರಿ ಎನ್ನುತ್ತದೆ ಭಾರತೀಯ ರಿಸರ್ವ್‌ ಬ್ಯಾಂಕ್‌. ಮೋಸ ಮಾಡುವ ಇಂಥ ವ್ಯಕ್ತಿ ಸಂಸ್ಥೆಗಳು 'ತಾವು ರಿಸರ್ವ್‌ ಬ್ಯಾಂಕ್‌ನಿಂದ ಅನುಮತಿಪಡೆದಿದ್ದೇವೆ' ಎಂದು ಸುಳ್ಳುಸುಳ್ಳೇ ಹೇಳಿ ಅಮಾಯಕರನ್ನು ವಂಚಿಸುತ್ತವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ನಿರ್ದೇಶಕಿ ದೇವಕಿ ಮುತ್ತುಕೃಷ್ಣನ್‌ ಪ್ರಕಟಣೆ ಹೊರಡಿಸಿದ್ದಾರೆ.

-ನಿಮ್ಮ ದಾನರೂಪದ ಹಣ ಅಪಾತ್ರರಿಗೆ ಹೋಗಬಾರದು

ಶ್ರೀ ಕಂಚಿ ಕಾಮಕೋಟಿ ಪೀಠದ ಸಾರ್ವಜನಿಕ ಸೇವಾ ಹಸ್ತ ಕರ್ನಾಟಕಕ್ಕೂ ವಿಸ್ತರಿಸಲಿದ್ದು ಬೆಂಗಳೂರು ಮತ್ತು ಭದ್ರಾವತಿಯಲ್ಲಿ ಆಸ್ಪತ್ರೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಭೂಮಿ ಮಂಜೂರಾತಿ ದೊರೆತ ಕೂಡಲೇ ಕಟ್ಟಡ ನಿರ್ಮಾಣವಾಗಲಿದ್ದು ಬಡ ಮತ್ತು ಮಧ್ಯ ವರ್ಗಕ್ಕೆ ಅನುಕೂಲ ಕಲ್ಪಿಸುವ ಕಣ್ಣಾಸ್ಪತ್ರೆಗಳನ್ನು ತೆರೆಯಲಾಗುವುದು ಎಂದು ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. 1977ರಲ್ಲಿ ಕೊಯಮತ್ತೂರಿನಲ್ಲಿ ಸ್ಥಾಪಿಸಲಾಗಿರುವ ಶಂಕರ ನೇತ್ರಾಲಯದ ಶಾಖೆಯನ್ನು ಬೆಂಗಳೂರಿನಲ್ಲಿ ಹಾಗೂ ಸ್ಥಳೀಯ ವೈದ್ಯರನ್ನೇ ಬಳಸಿಕೊಂಡು ಚಿಕಿತ್ಸೆಯ ಸೌಲಭ್ಯಗಳನ್ನು ಭದ್ರಾವತಿಯಲ್ಲಿ ಕಲ್ಪಿಸುವುದು ಪೀಠದ ಗುರಿ.

ಕರ್ನಾಟಕದ ವಿವಿಧ ಭಾಗಗಳಲ್ಲಿ ಹಿಂದುಳಿದ ಜನತೆಗೆ ಶಿಕ್ಷಣ ಸೌಲಭ್ಯ ಮತ್ತು ವಸತಿ ವಿದ್ಯಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿರುವ ಪೀಠ ಸದ್ಯಕ್ಕೆ ಬೆಂಗಳೂರಿನ ಮಲ್ಲೇಶ್ವರ, ಬಳ್ಳಾರಿಯ ಹೊಸಪೇಟೆ, ಉಡುಪಿಯ ಕೊಲ್ಲೂರು, ದಕ್ಷಿಣ ಕನ್ನಡದ ಸುಳ್ಯದಲ್ಲಿ ಋಗ್ವೇದ ಹಾಗೂ ಯಜುರ್ವೇದ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದೆ.

-ಆಧ್ಯಾತ್ಮ ಒಳಗಣ್ಣನ್ನು ತೆರೆದರೆ, ಕಣ್ಣಾಸ್ಪತ್ರೆಗಳು ಹೊರಗಣ್ಣನ್ನು ರಿಪೇರಿ ಮಾಡುತ್ತವೆ.

ಕಾಫಿ ಕಾಂಡಕೊರಕ ಹುಳವನ್ನು ನಿರ್ನಾಮಮಾಡುವ ನೂತನ ವಿಧಾನ ಕುರಿತ ಸಂಶೋಧನೆಗಳಲ್ಲಿ ಅಮೆರಿಕಾ ಮತ್ತು ಮೆಕ್ಸಿಕೋದ ವಿಜ್ಞಾನಿಗಳು ತೊಡಗಿದ್ದಾರೆಂಬ ಸುದ್ದಿ ಬಂದಿದೆ. ಕಾಂಡಕೊರಕ ಹುಳು ಉಪಟಳದಿಂದ ಜಗತ್ತಿನಾದ್ಯಂತ ವರ್ಷವೊಂದಕ್ಕೆ 500 ದಶಲಕ್ಷ ಡಾಲರ್‌ ನಷ್ಟವುಂಟಾಗುತ್ತದೆ ಮಾತ್ರವಲ್ಲದೆ ಕಾಫಿ ಬೀಜಕ್ಕೂ ಹಾನಿಯುಂಟಾಗುತ್ತದೆ.

ಕಾಂಡಕೊರಕ ಹುಳು ನಿರ್ನಾಮ ಯಜ್ಞದಲ್ಲಿ ತೊಡಗಿರುವ ವಿಜ್ಞಾನಿಗಳಿಗೆ ನಮೋನ್ನಮಃ ಎಂಬ ಪ್ರತಿಕ್ರಿಯೆ ಮಡಿಕೇರಿಯ ಬೆಳೆಗಾರರಿಂದ ಬಂದರೆ, ಹೊಸ ಕೀಟನಾಶಕದಿಂದ ಹೊಸ ತೊಂದರೆಗಳೇನು ಬರುತ್ತವೋ ಎಂಬ ಚಿಂತೆ ಎಂಡ್ರಿನ್‌ ವಿರೋಧಿ ಚಿಕ್ಕಮಗಳೂರು ರೈತರದು.

ಈ ಮಧ್ಯೆ ಇವತ್ತು ಮತ್ತು ನಾಳೆ ಬೆಂಗಳೂರಿನಲ್ಲಿ ತೋಟದ ಬೆಳೆಗಾರರ 46ನೇ ವಾರ್ಷಿಕ ಸಭೆ ಏರ್ಪಾಟಾಗಿದೆ. ಕಾಫಿ ಮಂಡಳಿಯ ಅಧ್ಯಕ್ಷ ಲಕ್ಷ್ಮಿ ವೆಂಕಟಾಚಲಂ ಮತ್ತು ತೋಟದ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಂಕರೇಗೌಡ ಅವರುಗಳಲ್ಲದೆ ಕೇಂದ್ರ ಸರಕಾರದ ವಾಣಿಜ್ಯ ಇಲಾಖೆಯ ಮುಖ್ಯಸ್ಥರು, ಯೋಜನಾ ಖಾತೆಯ ಸಚಿವರು ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸುತ್ತಾರೆ. ಈ ಸಭೆ ಕಾಂಡಕೊರೆಯುವ ಹುಳು ಬಗ್ಗೆ ಚರ್ಚಿಸುವುದಿಲ್ಲ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಕಾಫಿ , ತೆಂಗು, ಅಡಿಕೆ, ಏಲಕ್ಕಿ, ಮುಂತಾದುವುಗಳನ್ನು ಬೆಳೆಯುವ ರೈತರ ಮಿದುಳನ್ನು ಕೊರೆಯುತ್ತಿರುವ ಬೆಂಬಲ ಬೆಲೆ, ರಫ್ತು, ಮಧ್ಯವರ್ತಿಗಳ ಉಪಟಳ ಮುಂತಾದ ಹುಳಗಳ ಬಗ್ಗೆ ಅಲ್ಲಿ ಮುಕ್ತ ಚರ್ಚೆ ನಡೆಯುತ್ತದೆ.

-ನೀವೂ ಹೋಗುವಿರಾದರೆ ಸಭೆ ಏಟ್ರಿಯಾ ಹೋಟೆಲಿನ ಪಂಚತಾರಾ ವಾತಾವರಣದಲ್ಲಿ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News Bytes from Karnataka: 05-11-04. From Crime story to Coffee growers day-to-day problems

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more