ಕೊರೆವ ಚಳಿಯಲಿ ಚರ್ಮದ ಸೌಂದರ್ಯ ರಕ್ಷಣೆ ಹೇಗೆ?
*ದಟ್ಸ್ ಕನ್ನಡ ಬ್ಯೂರೊ
ಬೆಳ ಬೆಳಗ್ಗೆ ಕಡಿಯುವ ಚಳಿ..
ಹಾಸಿಗೆಯಿಂದ ಏಳಬೇಕೆಂದರೆ ಮನಸ್ಸಿಲ್ಲ . ಸ್ನಾನ, ಆಫೀಸು, ಸ್ಕೂಲುಗಳ ಭರಾಟೆ ಬೇಡಪ್ಪಾ ಬೇಡ. ಆದರೆ ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ಹೊತ್ತಿಗೆ ಸರಿಯಾಗಿ ಸೂರ್ಯ ಎದ್ದಿರುತ್ತಾನೆ. ಹಿತವಾಗಿ ತಡವುವ ಬೆಚ್ಚಗಿನ ಬಿಸಿಲು...ಖುಷಿಯೋ ಖುಷಿ, ಹಾಳು ಆಫೀಸು ಇಲ್ಲವೆಂದರೆ ಈ ಟ್ರಾಫಿಕ್ಕು ಜ್ಯಾಮ್ ಇನ್ನಷ್ಟು ಹೊತ್ತಿರಲಿ ಎಂದು ಹಾರೈಸಬಹುದಿತ್ತು.
ಹೀಗೆ ಕೊರೆಯುವ ಚಳಿಯಿಂದ ನರಳಿದ ಚರ್ಮವನ್ನು ತಟ್ಟನೆ ಸುಡು ಬಿಸಿಲಿಗೊಡ್ಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ವೈದ್ಯರ ಸಲಹೆ. ಚಳಿಗಾಲದಲ್ಲಿ ಚರ್ಮ ಒಣಗಿ ಹೋಗುವುದು, ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಆದ್ರಿಂದಲೇ ಚಳಿಗಾಲದಲ್ಲಿ ಎಣ್ಣೆ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಕು. ಕಡ್ಲೇಕಾಯಿ, ಎಳ್ಳು.. ಹೀಗೆ ಎಣ್ಣೆ ಅಂಶ ಇರುವ ಕಾಳು ಪದಾರ್ಥಗಳನ್ನು ಚಳಿಗಾಲದಲ್ಲಿ ಸೇವಿಸುವುದು ಸೂಕ್ತ. ಒಣ ಚರ್ಮದ ಗುಣದವರಾಗಿದ್ದರೆ ಅವರು ಇನ್ನಷ್ಟು ಹೆಚ್ಚು ಕಾಳಜಿ ವಹಿಸಬೇಕು.
ಸಾಮಾನ್ಯವಾಗಿ ಚಳಿಗಾಲದ ಒಣ ವಾತಾವರಣದಲ್ಲಿ ಚರ್ಮದಲ್ಲಿರುವ ನೀರಿನ ಅಂಶ ಬೇಗನೇ ಇಂಗಿ ಹೋಗುತ್ತದೆ. ಆದ್ದರಿಂದ ಆಗಾಗ ನೀರು ಸೇವಿಸುವುದೂ ಅಗತ್ಯ. ಮಣಿಪಾಲ ಆಸ್ಪತ್ರೆ ಕಳೆದ ಎರಡು ತಿಂಗಳಿನಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಸೂಕ್ಷ್ಮ ಚರ್ಮ ಇರುವವರು ಚಳಿಗಾಲದಲ್ಲಿ ತುಂಬಾ ಬೇಗನೇ ಚರ್ಮದ ಕಾಯಿಲೆಗೆ ಒಳಪಡುತ್ತಾರೆ. ಮಣಿಪಾಲ ಆಸ್ಪತ್ರೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ 1000 ಜನರ ಮೇಲೆ ಸರ್ವೆ ನಡೆಸಿತ್ತು. ಅವರಲ್ಲಿ ಶೇ 14. 2 ಮಂದಿ ಚಳಿಗಾಲದ ಒಣ ವಾತಾವರಣದಿಂದ ಚರ್ಮದ ಕಾಯಿಲೆಗೆ ತುತ್ತಾಗಿದ್ದಾರೆ.
ಕಾಯಿಲೆಗಳು ತೀರಾ ಸಾಮಾನ್ಯ ಅಂತ ಅನಿಸಿದರೂ, ತುರಿಸುವಿಕೆ, ರಕ್ತ ಸೋರುವಿಕೆ, ಚರ್ಮದ ಬಿಗಿತ, ಹಿಮ್ಮಡಿ ಒಡೆಯುವುದು, ಸಣ್ಣ ಪುಟ್ಟ ಗಾಯಗಳೂ ತೀರಾ ದೊಡ್ಡದಾಗಿ ಪರಿಣಮಿಸುವುದು.. ಹೀಗೆ ವಾತಾವರಣದ ಪ್ರಭಾವದಿಂದ ಚರ್ಮರೋಗಗಳು ಜಾಸ್ತಿಯಾಗುತ್ತಿರುವುದು ಕಂಡು ಬಂದಿದೆ.
ಇದಕ್ಕಾಗಿ ಚಳಿಗಾಲದ ಸಂದರ್ಭದಲ್ಲಿ ಚರ್ಮ ತುರಿಸುವಿಕೆ ಶುರುವಾದ ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಾರೆ ಮಣಿಪಾಲ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ. ಕೃಪಾ ಶಂಕರ್.
ಹೆಚ್ಚಾಗಿ ಥಂಡಿ ಹವೆಗೆ ತೆರೆದುಕೊಂಡಿರುವ ದೇಹದ ಭಾಗಗಳೆಂದರೆ- ಮೊಣಕಾಲುಗಳು, ಮೊಣಕೈಗಳು, ಬೆನ್ನು, ತೊಡೆಗಳು ಹಾಗೂ ಮುಖ. ಜನವರಿ ಹಾಗೂ ಫೆಬ್ರವರಿ ಅವಧಿಯಲ್ಲಿ ಒಣ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮುನ್ನೆಚ್ಚರಿಕೆ ಕ್ರಮವಾಗಿ ನೀವು ಮಾಡಬೇಕಾದುದೇನು ?
ಡಾ. ಕೃಪಾಶಂಕರ್ ಹೇಳುತ್ತಾರೆ:
- ಈ ಅವಧಿಯಲ್ಲಿ ಕೇವಲ ಮಾಯಿಶ್ಚರೈಸರ್ ಉಪಯೋಗಿಸಬೇಡಿ, ಸನ್ ಸ್ಕಿೃೕನ್ ಲೋಶನ್ ಬಳಸಿ. ತುಂಬಾ ಸಾರಿ ಸೋಪ್ ಬಳಸಬೇಡಿ. ದಿನಕ್ಕೆ ಒಂದೇ ಸಾರಿ ಸೋಪ್ ಉಪಯೋಗಿಸಬೇಕು. ಹಳ್ಳಿಗಳಲ್ಲಾದರೆ ಚಳಿಗಾಲ ಬಂತೆಂದರೆ ಸೋಪ್‌ನ ಬದಲಿಗೆ ಕಡ್ಲೇ ಹಿಟ್ಟು ಬಳಸುತ್ತಾರೆ. ಅದು ಒಳ್ಳೆಯದು.
- ಸ್ನಾನವಾಗಿ ಮೂರು ನಿಮಿಷದೊಳಗೇ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು.
- ಮುಖಕ್ಕೆ ಎಣ್ಣೆ ಹಚ್ಚಿಕೊಳ್ಳುವುದೂ ಕೂಡ ಒಳ್ಳೆಯ ಆರೈಕೆ.
- ಚಳಿಗಾಲದಲ್ಲಿ ಎಣ್ಣೆ ಸ್ನಾನಕ್ಕೆ ಹೆಚ್ಚು ಗಮನಕೊಡಿ.
- ದೊಡ್ಡವರು ಹರಳೆಣ್ಣೆ ಬಳಸುವುದು ಅತ್ಯುತ್ತಮ.
- ದಪ್ಪಗಾಗುತ್ತೇವೆ ಎಂಬ ಹೆದರಿಕೆ ಇಲ್ಲದೇ ಇದ್ದರೆ ಚಳಿಗಾಲಕ್ಕೆ ಕೊಬ್ಬಿನಂಶ ಇರುವ ಆಹಾರವನ್ನು ಬಳಸಿ.
- ಎ. ಸಿ. ಆಫೀಸಿನಲ್ಲಿ ಕೆಲಸ ಮಾಡುವವರಾದರೆ ಮಾಯಿಶ್ಚರೈಸರ್ ಬಳಕೆ ಕಡ್ಡಾಯ.












Click it and Unblock the Notifications