ಹುಟ್ಟಿತು ವಿಶ್ವದ ಮೊದಲ ಕ್ಲೋನ್‌ಡ್ ಹೆಣ್ಣು ಮಗು
ಮಿಯಾಮಿ : ಅಧಿಕೃತವಾಗಿ ಕ್ಲೋನಿಂಗ್ ಮೂಲಕ ಹುಟ್ಟಿರುವ ಮೊದಲ ಮಗು ತಮ್ಮ ಸಾಧನೆಯ ಫಲವೆಂದು ಫ್ರೆಂಚ್ ವಿಜ್ಞಾನಿ ಬ್ರಿಗಿಟ್ ಬೋಯ್ಸೆಲಿಯರ್ ಹೇಳಿದ್ದಾರೆ. ಅಂದಹಾಗೆ, ಹುಟ್ಟಿರುವ ಕ್ಲೋನಿಂಗ್ ಮಗು ಹೆಣ್ಣು.
ಹ್ಯುಮನ್ ಕ್ಲೋನಿಂಗ್ ಸೊಸೈಟಿ ಕ್ಲೋನಾಯ್ಡ್‌ನ ಅಧ್ಯಕ್ಷೆಯಾಗಿರುವ ಬೋಯ್ಸೆಲಿಯರ್ ದೂರವಾಣಿ ಮೂಲಕ ತಮ್ಮ ಸಾಧನೆ ಹೇಳಿಕೊಂಡಿದ್ದಾರೆ. ಕ್ಲೋನಿಂಗ್ ಪರ ಪ್ರತಿಪಾದನೆ ಮಾಡುತ್ತಿರುವವರೆಲ್ಲಾ ಸೇರಿ ರೇಲಿಯನ್ಸ್ ಎಂಬ ಪಂಥವನ್ನೇ ಹುಟ್ಟುಹಾಕಿದ್ದು, ಇದಕ್ಕೆ ಸೇರಿದ ವಿಜ್ಞಾನಿಗಳೆಲ್ಲಾ ಕ್ಲೋನಿಂಗ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಹುಟ್ಟಿರುವ ಕ್ಲೋನಿಂಗ್ ಹೆಣ್ಣು ಮಗುವಿನ ಬಗ್ಗೆ ಹೆಚ್ಚು ಮಾಹಿತಿ ಕೊಡಲು ಬೋಯ್ಸೆಲಿಯರ್ ನಿರಾಕರಿಸಿದರು. ಸಿಸೇರಿಯನ್ ಮೂಲಕ ಮಗು ಗುರುವಾರ (ಡಿ.26) ಜನ್ಮ ತಳೆಯಿತು. ತನ್ನ ತಾಯಿ ಆಲ್ಬೀಟ್‌ಳ ತದ್ರೂಪು ಈ ಮಗು. ಅಮೆರಿಕ ದಂಪತಿಗಳು ಬಯಸಿ ಪಡೆದ ಈ ಮಗುವಿಗೆ ಜನ್ಮ ಕೊಡುವ ಮುನ್ನ ನಡೆಸಿದ ವೈಜ್ಞಾನಿಕ ಪರೀಕ್ಷೆಗಳನ್ನು ಅಮೆರಿಕ ಸರ್ಕಾರ ಖಂಡಿಸಿತ್ತು.
ಸುಮಾರು 25 ಸಾವಿರ ವರ್ಷಗಳ ಹಿಂದೆ ಬೇರೆಡೆಯಿಂದ ಹಾರುವ ತಟ್ಟೆಗಳಲ್ಲಿ ಬಂದ ಜೀವಿಗಳೇ ಭೂಮಿಯಲ್ಲಿ ಮಾನವ ಸಮುದಾಯವಾಗಿ ಬೆಳೆದವು. ಹೀಗಾಗಿ ಮಾನವ ಸಂತಾನ ಬೆಳೆದಿರುವುದೇ ಕ್ಲೋನಿಂಗ್‌ನಿಂದ. ಇದರಿಂದಲೇ ಮಗು ಅಮ್ಮನನ್ನೋ, ಅಪ್ಪನನ್ನೋ ಹೋಲುತ್ತದೆ ಅನ್ನುವುದು ರೇಲಿಯನ್ಸ್ ಪಂಥದವರ ವಾದ. ಫ್ರೆಂಚ್‌ನ ಮಾಜಿ ಪತ್ರಕರ್ತ ರೇಲ್ ಎಂಬಾತ ಈ ವಾದವನ್ನು ಮೊದಲು ಜನರ ಮುಂದಿಟ್ಟ.
ಕ್ಲೋನಿಂಗ್ ಮೂಲಕ ಮಕ್ಕಳನ್ನು ಹುಟ್ಟುಹಾಕಲು ನಡೆಸುವ ವೈಜ್ಞಾನಿಕ ಸರ್ಕಸ್ಸುಗಳು ಇದಮಿತ್ಥಂ ಫಲಿತ ಕೊಡುತ್ತವೆ ಎಂಬುದು ಈಗಲೂ ಖಚಿತವಾಗಿಲ್ಲ. ಮಗು ಹುಟ್ಟಲೆಂದೇ ಈ ಪಾಟಿ ಸರ್ಕಸ್ಸು ಮಾಡಬೇಕು. ಹುಟ್ಟಿದ ಮಗುವನ್ನು ಉಳಿಸಿ, ಬೆಳೆಸಲು ಇನ್ನೂ ಏನೇನು ಮಾಡಬೇಕೋ? ಇವತ್ತಿನ ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಿದ ಜಗತ್ತಲ್ಲೇ ಇಷ್ಟೆಲ್ಲಾ ತೊಂದರೆಗಳಿರುವಾಗ, 25 ಸಾವಿರ ವರ್ಷಗಳ ಹಿಂದೆ ಕ್ಲೋನಿಂಗ್ ಇತ್ತು ಅನ್ನೋದನ್ನು ನಂಬಲಾದೀತೆ ಅಂತ ರೇಲ್‌ರನ್ನು ಕೆಣಕಿದವರೂ ಉಂಟು. ಈ ಪ್ರಶ್ನೆಗೂ ರೇಲ್ ಎದೆಗೊಟ್ಟು ಸೈ ಎನಿಸಿಕೊಂಡಿದ್ದಾರೆ ಅನ್ನುವುದು ಬೋಯ್ಸೆಲಿಯರ್ ಅಭಿಪ್ರಾಯ.
ಆದರೂ ಮಾನವ ಹಕ್ಕುಗಳ ಕಾಳಜಿ ಉಳ್ಳವರು ಕ್ಲೋನಿಂಗ್ ಪ್ರಕ್ರಿಯೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಇದರ ನಡುವೆಯೇ ಕ್ಲೋನಿಂಗ್ ಹೆಣ್ಣು ಮಗು ಹುಟ್ಟಿದೆ. ಮುಂದೆ ಇನ್ನಷ್ಟು ಕ್ಲೋನಿಂಗ್ ಬೇಬಿಗಳನ್ನು ಹುಟ್ಟಿಸುವ ನಿಟ್ಟಿನಲ್ಲಿ ಪ್ರಯೋಗಗಳು ಅವಿರತ ಸಾಗಿವೆ.(ಎಎಫ್‌ಪಿ)












Click it and Unblock the Notifications