ದೇಶದ 1000 ಬಡ ಮಕ್ಕಳಿಗೆ ‘ಗಿಫ್ಟ್ ಆಫ್ ಲೈಫ್’
ಬೆಂಗಳೂರು : ಭಾರತದ ಒಂದು ಸಾವಿರ ಬಡ ಮಕ್ಕಳಿಗೆ ಇನ್ನೊಂದು ವರ್ಷದಲ್ಲಿ ಉಚಿತ ಹೃದ್ರೋಗ ಚಿಕಿತ್ಸೆ ಮಾಡಿಸುವ ಸೇವಾ ಕೈಂಕರ್ಯವನ್ನು ಅಮೆರಿಕ ಮೂಲದ ‘ಗಿಫ್ಟ್ ಆಫ್ ಲೈಫ್’ ಶುಕ್ರವಾರ ಶುರು ಮಾಡಿದೆ. ಇದಕ್ಕೆ ಹಲವು ದಶಲಕ್ಷ ಡಾಲರ್ ಹಣವನ್ನು ಸಂಸ್ಥೆ ಖರ್ಚು ಮಾಡಲಿದೆ.
ಭಾರತದ 10 ಆಸ್ಪತ್ರೆಗಳ ಜೊತೆ ‘ಗಿಫ್ಟ್ ಆಫ್ ಲೈಫ್’ ಒಪ್ಪಂದ ಮಾಡಿಕೊಂಡಿದೆ. ಆಸ್ಪತ್ರೆಗಳು ಆಯ್ದ ಬಡ ಮಕ್ಕಳಿಗೆ ಹೃದ್ರೋಗ ಚಿಕಿತ್ಸೆ ಕೊಡುತ್ತವೆ. ಅದರ ಖರ್ಚನ್ನು ‘ಗಿಫ್ಟ್ ಆಫ್ ಲೈಫ್’ ಭರಿಸುತ್ತದೆ. ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿರುವ ಹತ್ತು ಆಸ್ಪತ್ರೆಗಳ ಪೈಕಿ ಮಹಾವೀರ್ ಜೈನ್ ಹಾರ್ಟ್ ಸೆಂಟರ್ ಕೂಡ ಒಂದು. ‘ಮಗುವ ಉಳಿಸಿ’ ಎಂಬ ಕಾರ್ಯಕ್ರಮದಡಿ ಶುಕ್ರವಾರ ಇಬ್ಬರು ಮಕ್ಕಳಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ಜಗತ್ತಿನ ಎಷ್ಟು ಸಾಧ್ಯವೋ ಅಷ್ಟು ಹೃದಯಗಳನ್ನು ಮುಟ್ಟುವುದು ನಮ್ಮ ಉಮೇದಿ. ಹೃದಯಕ್ಕೆ ಸಂಬಂಧಿಸಿದ ದೊಡ್ಡ ಮೊತ್ತದ ಚಿಕಿತ್ಸೆ ಭರಿಸಲಾಗದ ಹಳ್ಳಿ ಮಕ್ಕಳನ್ನೇ ಈ ಯೋಜನೆಗೆ ಆರಿಸಬೇಕೆಂಬ ಸಲಹೆ ನಮ್ಮದು ಎಂದು ಗಿಫ್ಟ್ ಆಫ್ ಲೈಫ್‌ನ ಅಧ್ಯಕ್ಷ ರವಿಶಂಕರ್ ಭೂಪ್ಲಾಪುರ್ ತಿಳಿಸಿದರು.
ಶುಕ್ರವಾರ ಶಸ್ತ್ರ ಚಿಕಿತ್ಸೆ ಮಾಡಿದ ಮಕ್ಕಳನ್ನು ಧಾರವಾಡದಲ್ಲಿ ಇತ್ತೀಚೆಗೆ ನಡೆಸಿದ ಶಿಬಿರದಲ್ಲಿ ಆಯ್ಕೆ ಮಾಡಿದ್ದೆವು. ಈ ಮಕ್ಕಳು ಕಡು ಬಡ ಕುಟುಂಬಕ್ಕೆ ಸೇರಿದವು ಎಂದು ಬಿಎಂಜೆ ಹಾರ್ಟ್ ಸೆಂಟರ್‌ನ ಮುಖ್ಯ ಹೃದ್ರೋಗ ತಜ್ಞ ಡಾ.ಎಸ್.ಎಸ್.ರಮೇಶ್ ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications