ಭಾರತೀಯ ಸಂಜಾತನಿಗೆ ಅಮೆರಿಕಾದ ವಿಜ್ಞಾನ ಪ್ರಶಸ್ತಿ
ನ್ಯೂಯಾರ್ಕ್ : ಭತ್ತದ ಹೊಸ ತಳಿ ಸಂಶೋಧನೆಯಲ್ಲಿ ಗಣನೀಯ ಕೆಲಸ ಮಾಡಿರುವುದಕ್ಕಾಗಿ ಭಾರತೀಯ ಸಂಜಾತ, ಹದಿನಾರರ ಹರೆಯದ ರೋಷನ್ ಪ್ರಭುವಿಗೆ ಅಮೆರಿಕೆಯ ಪ್ರತಿಷ್ಠಿತ ಸೀಮನ್ಸ್ ವಾಷಿಂಗ್ಟನ್‌ಹೌಸ್ ವಿಜ್ಞಾನ ಪ್ರಶಸ್ತಿ ಸಂದಿದೆ.
ಜ್ಯುಲಿಯಟ್ ಜಿರಾರ್ಡ್ ಎಂಬ 18ರ ಹರೆಯದ ಯುವಕನೊಂದಿಗೆ ಒಂದು ಲಕ್ಷ ಡಾಲರ್ ನಗದನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ರೋಷನ್ ಹಂಚಿಕೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 17 ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಸಂದಿದೆ.
ಬಿತ್ತನೆ ಮಾಡಿದ ನಂತರ ಕಡಿಮೆ ನೀರಿನ ಬಳಕೆಯಲ್ಲೂ ಬಲು ಬೇಗ ತೆನೆಗಟ್ಟುವ ಭತ್ತದ ತಳಿ ಅಭಿವೃದ್ಧಿಗಾಗಿ ಜೀನ್‌ಗಳನ್ನು ರೋಷನ್ ಹಾಗೂ ಜಿರಾರ್ಡ್ ಗುರುತಿಸಿದ್ದಾರೆ. ಇದು ಯಶಸ್ವಿಯಾಗಿ ಜಾರಿಗೆ ಬಂದರೆ, ಮನುಕುಲಕ್ಕೆ ಮರೆಯಲಾಗದ ಕೊಡುಗೆ ಎನ್ನುತ್ತಾರೆ ಸೀಮನ್ಸ್ ಫೌಂಡೇಷನ್‌ನ ಅಧ್ಯಕ್ಷ ಆಲ್ಬರ್ಟ್ ಹೋಸರ್.
ಕಾರ್ನೆಲ್ ವಿಶ್ವವಿದ್ಯಾಲಯ ಪ್ರಾಯೋಜಿಸಿದ ಈ ಯೋಜನೆಯಲ್ಲಿ ಕಳೆದ ಬೇಸಗೆಯಿಂದ ರೋಷನ್ ಹಾಗೂ ಜಿರಾರ್ಡ್ ಕೆಲಸ ಮಾಡಿದರು. ಅಂದಹಾಗೆ, ರೋಷನ್ ತಂದೆ ರಿಯಲ್ ಎಸ್ಟೇಟ್ ದಲ್ಲಾಳಿ ಹಾಗೂ ಸೆಕ್ಯುರಿಟಿ ಗಾರ್ಡಾಗಿ ಕೆಲಸ ಮಾಡುತ್ತಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications